ಸರಹದ್ದುಗಳನ್ನು ಒಡೆದು ನಿಲ್ಲಬೇಕೆಂಬ ಅನಿಕೇತನ ಪ್ರಜ್ಞೆ ಇರಬೇಕು - ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಸರಹದ್ದುಗಳಿಲ್ಲದ ಭೂಮಿಯ ಕನಸು ಕವನ ಸಂಕಲನ ಲೋಕಾರ್ಪಣೆ:

ಸರಹದ್ದುಗಳಿಲ್ಲದ ಭೂಮಿಯ ಕನಸು ಕವನ ಸಂಕಲನ ಲೋಕಾರ್ಪಣೆ:

ಸರಹದ್ದುಗಳನ್ನು ಒಡೆದು ನಿಲ್ಲಬೇಕೆಂಬ ಅನಿಕೇತನ ಪ್ರಜ್ಞೆ ಇರಬೇಕು - ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು


ಕಾರವಾರ .ಫೆ.8  : ಇತ್ತೀಚಿನ ದಿನಗಳಲ್ಲಿ ಅನೇಕ ಕವನ ಸಂಕಲನಗಳು ಬಿಡುಗಡೆಯಾಗುತ್ತಿವೆ ಆದಾಗ್ಯೂ ಬಹುಪಾಲು ಕವನಗಳು ಓದಿಸಿಕೊಂಡು ಹೋಗುವಲ್ಲಿ ವಿಫಲವಾಗುತ್ತವೆ ಇದಕ್ಕೆ ಅಪವಾದವೆನ್ನುವಂತೆ ಶ್ರೀಮತಿ ನಿರ್ಮಲಾ ಶೆಟ್ಟರ ವಿರಚಿತ ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕವನ ಸಂಕಲನ ನಿರಾಯಾಸವಾಗಿ ಓದಿಸಿಕೊಂಡು ಹೋಗುವುದರ ಜೊತೆಗೆ ಯಶಸ್ಸಿಗೆ ವ್ಯತಿರಿಕ್ತವಾಗುವ ಸರಹದ್ದುಗಳನ್ನು ಒಡೆದು ಮುನ್ನುಗ್ಗಬೇಕೆಂಬ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದು ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು. 

ಅವರು  ರವಿವಾರ ಗದಗ  ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಡಾ.ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರ, ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಹಾಗೂ ಲಕ್ಷ್ಮೇಶ್ವರದ ಪಾಲ್ಗುಣಿ ಪ್ರಕಾಶನ ಇವುಗಳ ಸಂಯುಕ್ತಾಶ್ರಯದಲ್ಲಿ  ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿ,

ಕವನದ ಆಶಯಗಳು ಟಿಪ್ಪಣಿ ಮಾಡಿಟ್ಟುಕೊಳ್ಳಲು ಯೋಗ್ಯವಾಗಿವೆ, ಕಾವ್ಯ ರಚನೆಗೆ ಎಲ್ಲೆಗಳಿಲ್ಲ, ಉದ್ದೇಶ ಮೌಲ್ಯಯುತವಾಗಿದ್ದರೆ ಅವುಗಳ ಹುಟ್ಟು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಬದುಕಿನ ಪ್ರತಿ ಹಂತದಲ್ಲೂ ಆಶಾಭಾವನೆಯನ್ನು ಇಟ್ಟುಕೊಳ್ಳಬೇಕೆಂದು ಕಲಿಸುವ ಈ ಕವನ ಸಂಕಲನ ಬದುಕಿಗೆ ನವಚೈತನ್ಯ ತುಂಬಬಲ್ಲದು. ಬದುಕು ಸುಂದರವಾಗಬೇಕಾದರೆ, ಅರ್ಥಪೂರ್ಣವಾಗಬೇಕಾದರೆ ಅದಕ್ಕೆ ಇಂತಹ ಸೃಜನಶೀಲ ಕಾವ್ಯಗಳ ಸ್ಪರ್ಶ ಅಗತ್ಯ. ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳುವುದು ಇಂದಿನ ದಿನಮಾನದ ಆದ್ಯತೆಯಾಗಲಿ ಎಂದು ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಮಹಿಳೆಯರಿಗೆ-ಮಕ್ಕಳಿಗೆ ಸರ್ವರಂಗಗಳಲ್ಲೂ ಸ್ವಾತಂತ್ರ್ಯ ದೊರೆತರೆ ಉತ್ತುಂಗಕ್ಕೆ ತಲುಪಬಲ್ಲರು ಹಾಗೂ ಸಮಾಜಕ್ಕೆ ಅದ್ವೀತಿಯ ಕೊಡುಗೆ ನೀಡಬಲ್ಲರು. ನಮ್ಮದು ಮರೆವಿನ ಸಂಸ್ಕೃತಿಯಾಗದೇ, ಅರಿವಿನ ಸಂಸ್ಕೃತಿಯಾಗಿ ಕಾಲವಾಹಿನಿಯ ಹರವಿನ ಬಗ್ಗೆ ತಿಳುವಳಿಕೆ ಹೊಂದಬೇಕು ಎಂದರು. 

ಸಂಶೋಧಕ ಡಾ.ದೇವೇಂದ್ರಪ್ಪ ಜಾಜಿ ಮಾತನಾಡಿ, ಆಧುನಿಕ ಯುಗದ ಭರಾಟೆಯ ಬದುಕಿನ ಅಪಸವ್ಯಗಳಿಗೆ ಕಾವ್ಯ ಮದ್ದಾಗಿದೆ. ಮಾನವ ತನ್ನ ಚೌಕಟ್ಟಿಗೆ ಸೀಮಿತವಾಗುವ ಸಂಕುಚಿತತೆಯನ್ನು ತೊರೆದು ಎಲ್ಲೆ ಮೀರಿ ಬೆಳೆಯುವ ಪ್ರವೃತ್ತಿಯುಳ್ಳವನಾಗಬೇಕು ಎಂದರು. 

ಪತ್ರಕರ್ತ, ಕಾರವಾರ ಕಸಾಪ ಅಧ್ಯಕ್ಷ  ನಾಗರಾಜ ಹರಪನಹಳ್ಳಿ ಮಾತನಾಡಿ, ಕಾವ್ಯ ಮತ್ತು ಚಳುವಳಿಗಳು ಒಂದಾಗಬೇಕು, ಸಾಹಿತಿಯಾದವರು ಅಹಮ್ಮಿಕೆಯನ್ನು ತೊರೆದು ಬಸವಣ್ಣನವರಂತೆ ‘ಎನಗಿಂತ ಕಿರಿಯರಿಲ್ಲ’ ಎಂಬ ವಿನೀತ ಭಾವ ಹೊಂದಿರಬೇಕು.‌ಪ್ರಭುತ್ವ ಪ್ರಶ್ನಿಸುವುದನ್ನು ನಾವು ಕಲಿಯಬೇಕಿದೆ ಎಂದರು. ಕವಯಿತ್ರಿ 

ನಿರ್ಮಲಾ  ಹುಲ್ಲು ಗರಿಕೆ , ಮಳೆ, ‌ಮೋಡ, ಗಾಳಿಯ ಜೊತೆ ಮಾತಾಡಬಲ್ಲರು.  ಮನುಷ್ಯರ ಸಂಕಟ, ತಳಮಳ‌ ಹಿಡಿಯಬಲ್ಲರು. ಅಂತಹ ಧ್ವನಿಪೂರ್ಣ ಕವಿತೆಗಳು ಇಲ್ಲಿವೆ. ಬೆಂಕಿಯಿದ್ದಲ್ಲಿ ಕುದಿತವಿದ್ದದ್ದೇ...ಒಲೆಯಾದರೇನು, ಎದೆಯಾದರೇನು ಎಂಬ ಅವರ ಕವಿತೆ ಸಾಲುಗಳು , ಅವರ ಕಾವ್ಯದ ದಿಕ್ಕು ತೋರಿಸುತ್ತವೆ ಎಂದರು.

ಶೆಟ್ಟರ್‌ರವರ ಕವನ ಸಂಕಲನ ಪ್ರಕೃತಿ ಮತ್ತು ಮಹಾತ್ಮರ ಜೀವನ ದರ್ಶನಗಳನ್ನು ಒಳಗೊಂಡ, ಸರಳವಾಗಿ ಅರ್ಥೈಸಿಕೊಳ್ಳಬಹುದಾದ ಅಪರೂಪದ ಕೃತಿಯಾಗಿದೆ ಎಂದರು. 

ಕವನ ಸಂಕಲನದ ಲೇಖಕಿ ಶ್ರೀಮತಿ ನಿರ್ಮಲಾ ಶೆಟ್ಟರ್ ಮಾತನಾಡಿ, ತಮ್ಮ  ಕವನ ಸಂಕಲನದ ಆಶಯವನ್ನು ತಿಳಿಸಿದರು. ಶ್ರೀನಿವಾಸ ಕುಲಕರ್ಣಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತೋಂಟದಾರ್ಯ ಮಠದ ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿ-ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಾವಣಗೆರೆಯ ಸಾಹಿತಿ ಡಾ.ಆನಂದ ಋಗ್ವೇದಿ ಕವಿತೆಗಳನ್ನು ಉದಾಹರಿಸುತ್ತಾ ಕೃತಿ ಪರಿಚಯಿಸಿದರು.ಸರಹದ್ದು ಗಳಿಲ್ಲದ ಕವನ ಸಂಕಲನದ ಕವಿತೆಗಳು ಅಂತಿಮ ತೀರ್ಮಾನ ನೀಡದೆ ಬದುಕನ್ನು ಮೌನವಾಗಿ ತೆರೆದಿಡುತ್ತವೆ ಎಂದರು. ಇಲ್ಲಿನ ಕವಿತೆಗಳು ಧ್ವನಿಪೂರ್ಣವಾಗಿವೆ  ಎಂದರು.  ಪ್ರೊ.ಕೆ.ಬಿ ಸಂಕನಗೌಡರ ನಿರೂಪಿಸಿದರು. ಪ್ರೊ.ಶಿವರಾಮ ಬಂಡೇಮೇಗಳ ವಂದಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಈರಮ್ಮ ಮುತಗಾರ ಇವರನ್ನು ಸನ್ಮಾನಿಸಲಾಯಿತು. ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ವಿಜಯ ಕಿರೇಸೂರ, ಸಾಹಿತಿಗಳಾದ ಪ್ರಕಾಶ ಖಾಡೆ, ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ, ಅಣ್ಣಿಗೇರಿಯ ದಿ.ನಿಂಗಮ್ಮ ಹೂಗಾರ ಕಾಲೇಜಿನ ಪ್ರಾಚಾರ್ಯ ಎಸ್.ಎಸ್ ಹರ್ಲಾಪೂರ, ಸಾಹಿತಿ ಎ.ಎಸ್ ಮಕಾನದಾರ, ವಿನಾಯಕ ಕಮತದ, ಮರುಳಸಿದ್ಧಪ್ಪ ದೊಡ್ಡಮನಿ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.