ಬಾಂಬರ್ ಆದಿತ್ಯ ರಾವ್ ಧ್ವನಿ ಪರೀಕ್ಷೆ

ಮಂಗಳೂರು, ಜ 31, ಮಂಗಳೂರು ಬಜ್ಪೆ ವಿಮಾನ‌ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಬಾಂಬರ್ ಆದಿತ್ಯ ರಾವ್ ನನ್ನು ಇಂದು ಪೊಲೀಸರು ಧ್ವನಿ ಪರೀಕ್ಷೆ ನಡೆಸಿದ್ದಾರೆ. ಪಣಂಬೂರು ಎಸಿಪಿ ಕಚೇರಿಯಲ್ಲಿ ಆದಿತ್ಯ ರಾವ್ ಧ್ವನಿ ಪರೀಕ್ಷೆ ನಡೆಸಲಾಗಿದೆ. ಈ ಹಿಂದೆ ಆದಿತ್ಯ ರಾವ್ ಏರ್ ಪೋರ್ಟ್ ಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾಗಿ ತಾನೇ ಎಂದು ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕರೆ ಮಾಡಿದ್ದು ಈತನೇ ಎಂಬುದನ್ನು ದೃಢ ಪಡಿಸಲು ತನಿಖಾಧಿಕಾರಿಗಳು ಧ್ವನಿ ಪರೀಕ್ಷೆ ನಡೆಸಿ, ಪರಿಶೀಲನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ನಾಳೆ ಆದಿತ್ಯ ರಾವ್ ಪೊಲೀಸ್ ಕಸ್ಟಡಿ‌ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ನಾಳೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. 

ತನಿಖಾಧಿಕಾರಿಗಳು ಮತ್ತಷ್ಟು ದಿನ ಹೆಚ್ಚಿನ ವಿಚಾರಣೆ ಗಾಗಿ ಆದಿತ್ಯನನ್ನು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.ಇತ್ತೀಚೆಗಷ್ಟೇ ಆದಿತ್ಯ ರಾವ್ ಹೊಂದಿದ್ದ ಉಡುಪಿಯ ಬ್ಯಾಂಕ್ ಲಾಕರ್ ನನ್ನು ತನಿಖಾ ತಂಡ ಪರಿಶೀಲನೆ ನಡೆಸಿ ಲಾಕರ್‌ ನಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ನಂತರ ಆ ವಸ್ತು ಸೈನೇಡ್ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ದೃಢಪಟ್ಟಿತ್ತು. 

ಜ.20ರಂದು ಆದಿತ್ಯ ರಾವ್,‌ಮಂಗಳೂರಿನ ಬಜ್ಪೆ ವಿಮಾನದ ಟಿಕೇಟ್ ಕೌಂಟರ್ ಬಳಿ ಲ್ಯಾಪ್ ಟಾಪ್ ಬ್ಯಾಗ್ ವೊಂದರಲ್ಲಿ ಸಜೀವ ಬಾಂಬ್ ಇಟ್ಟು ಪರಾರಿಯಾಗಿದ್ದನು. ನಂತರ ತಾನೇ ಬಾಂಬ್ ಇಟ್ಟಿರುವುದಾಗಿ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದ. ನಂತರ ಮಂಗಳೂರು ಪೊಲೀಸರು, ಜೆಎಮ್ಎಫ್​ಸಿ 6 ನ್ಯಾಯಾಲಯಕ್ಕೆ ಆದಿತ್ಯ ರಾವ್ ನನ್ನು ಹಾಜರುಪಡಿಸಿದ್ದರು.ನ್ಯಾಯಾಧೀಶ ಕೆ.ಎನ್​.ಕಿಶೋರ್​ ಕುಮಾರ್​ ವಿಚಾರಣೆ ನಡೆಸಿ, ಆದಿತ್ಯ ರಾವ್ ನನ್ನು 10 ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದರು.