ಪಾಳುಬಿದ್ದ ಪೆಟ್ರೋಲ್ ಬಂಕ್ ಕಚೇರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಪಾಳುಬಿದ್ದ ಪೆಟ್ರೋಲ್ ಬಂಕ್ ಕಚೇರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ Body of unidentified man found in dilapidated petrol station office

ಲೋಕದರ್ಶನ ವರದಿ 

ಜಮಖಂಡಿ  21: ನಗರದ ದೇಸಾಯಿ ಸರ್ಕಲ್ ಬಳಿ ಸ್ಕೈ ಬಾರ್ ಸಮೀಪದ ಪಾಳುಬಿದ್ದ ರಿಲಯನ್ಸ್‌ ಪೆಟ್ರೋಲ್ ಬಂಕ್ ಕಚೇರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರು ರಿಲಯನ್ಸ್‌ ಪೆಟ್ರೋಲ್ ಬಂಕ್‌ನಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪರೀಶೀಲಿಸಿದ ಬಳಿಕ ಶವ ಪತ್ತೆಯಾಗಿದ್ದು, ಕೂಡಲೇ ಶಹರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಅನೀಲ ಕುಂಬಾರ ಸಿಬ್ಬಂದಿಗಳಾದ  ಶೇಖರ ನಾಯಿಕ, ಶಿವಾನಂದ ಪಾಟೀಲ, ಲೋಕೇಶ್ ಯಳಶೆಟ್ಟಿ ಶಂಕರ ಆಸಂಗಿ, ರಾಜು ಪೂಜೇರಿ, ಮಲ್ಲು ಕೋಲಾರ, ಸದಾಶಿವ ತೇಲಿ ಸೇರಿ ಪರೀಶೀಲನೆ ನಡೆಸಿದ್ದಾರೆ. ಅಪರಿಚಿತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಹಾಗೂ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.