ಆದರ್ಶ ಶಿಕ್ಷಕರ ದೇಹದಾನ: ಸಮಾಜಕ್ಕೆ ಮಾದರಿಯಾದ ಕುಟುಂಬದ ಮಾನವೀಯ ನಿರ್ಧಾರ

ಆದರ್ಶ ಶಿಕ್ಷಕರ ದೇಹದಾನ: ಸಮಾಜಕ್ಕೆ ಮಾದರಿಯಾದ ಕುಟುಂಬದ ಮಾನವೀಯ ನಿರ್ಧಾರ  Body Donation by an Exemplary Teacher: A Humanitarian Decision by a Family That Sets an Example for

ವಿಜಯಪುರ, ಆ. 3: ಜಿಲ್ಲೆಯಲ್ಲಿಯೇ ದೇಹದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚುತ್ತಿರುವ ಬೆನ್ನಲ್ಲೇ, ಇತ್ತೀಚೆಗೆ ನಿಧನರಾದ ಸಿಂದಗಿ ನಿವಾಸಿ ಹಾಗೂ ಆದರ್ಶ ಶಿಕ್ಷಕರಾದ ಹಣಮಂತರಾವ ತಮಾಜಿ ಕುಲಕರ್ಣಿ (77) ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಬಿ.ಎಲ್‌.ಡಿ.ಇ. ಆಸ್ಪತ್ರೆಗೆ ದೇಹದಾನ ಮಾಡುವ ಮೂಲಕ ಮಾನವೀಯ ಸಂದೇಶ ಸಾರಿದರು.  

ಶಿಕ್ಷಣ ಕ್ಷೇತ್ರದಲ್ಲಿ ಅಕ್ಷರದಾಸೋಹದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿದ್ದ ಹಣಮಂತರಾವ ಕುಲಕರ್ಣಿ ಅವರು ಸಮಾಜಮುಖಿ ಸೇವೆಯಿಂದ ಗುರುತಿಸಿಕೊಂಡಿದ್ದರು. ಅವರ ಅಂತಿಮ ಇಚ್ಛೆಗೆ ಗೌರವ ಸೂಚಿಸಿದ ಕುಟುಂಬ ಸದಸ್ಯರು ದೇಹದಾನದ ಮೂಲಕ ಮತ್ತೊಂದು ಸಾರ್ಥಕ ಸೇವೆ ಸಲ್ಲಿಸಿದರು.  

ಶುಕ್ರವಾರ ಬಿ.ಎಲ್‌.ಡಿ.ಇ. ಆಸ್ಪತ್ರೆಗೆ ತರಲಾದ ಮೃತದೇಹವನ್ನು ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಆರ್‌. ಎಸ್‌. ಬುಲಗೌಡ ಅವರು ಸ್ವೀಕರಿಸಿದರು. ಈ ವೇಳೆ ಮೃತರ ಕುಟುಂಬ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಸಮಾಜದಲ್ಲಿ ದೇಹದಾನದ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.  

ದೇಹದಾನವು ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಗೆ ಅಮೂಲ್ಯ ಕೊಡುಗೆಯಾಗಿದ್ದು, ಇಂತಹ ಮಾನವೀಯ ನಿರ್ಧಾರಗಳು ಸಮಾಜಕ್ಕೆ ಮಾದರಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.