ಬಿರ್ಸಾ ಮುಂಡಾ ಜಯಂತಿ ಆಚರಣೆ.

 ಬಿರ್ಸಾ ಮುಂಡಾ ಜಯಂತಿ ಆಚರಣೆ. Birsa Munda Jayanti celebration.

ಲೋಕದರ್ಶನ ವರದಿ 

ಬಿರ್ಸಾ ಮುಂಡಾ ಜಯಂತಿ ಆಚರಣೆ.  

ಕಾರವಾರ, ನ.15 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ , ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಲಾದ ಭಗವನ್ ಶ್ರೀ ಬಿರ್ಸಾಮುಂಡಾ ಜಯಂತಿ ಹಾಗೂ ಜನಜಾತೀಯ ಗೌರವ ದಿವಸ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ್ಚ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ದೀಲೀಶ್ ಶಶಿ ಉದ್ಘಾಟಿಸಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಕಾಡಿನಂಚಿನಲ್ಲಿ ಉಳಿದು ಕಾಡಿನ ಪ್ರಾಣಿಗಳು ಮತ್ತು ನಿಸರ್ಗದೊಂದಿಗೆ ಬದುಕಿ, ತಮ್ಮ ನಿರ್ದಿಷ್ಟ ಪ್ರದೇಶಗಳ ಹಕ್ಕಿಗಾಗಿ ಬ್ರಿಟಿಷರ ಬಂದೂಕಿನ ಎದುರು ಬಿಲ್ಲು ಬಾಣದೊಂದಿಗೆ ಬ್ರಿಟಿಷರ ವಿರುದ್ದ ಹೋರಾಡಿದ ಬುಡಕಟ್ಟು ಸಮುದಾಯದ ನಾಯಕನಾಗಿದ್ದ ಬಿರ್ಸಾ ಮುಂಡಾ ಅವರ ಜಯಂತಿಯನ್ನು ದೇಶದ್ಯಾಂತ ಆಚರಿಸಲಾಗುತ್ತಿದೆ, ಬುಡಕಟ್ಟು ಸಮುದಾಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು ಎಂದರು.  

 ಜಿಲ್ಲೆಯ ಸಿದ್ದಿ ಜನಾಂಗದವರು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡೆದು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿಬೇಕು. ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಮುಂದಿನ ದಿನದಲ್ಲಿ ಸಿದ್ದಿ ಸಮುದಾಯದ ಮಕ್ಕಳು ಬಿರ್ಸಾ ಮುಂಡಾರವರಂತೆ ಸಮಾಜಕ್ಕೆ, ಜನಾಂಗಕ್ಕೆ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತರಾಗಿ ಎಂದರು.   

ಬಿರ್ಸಾ ಮುಂಡಾರವರ ಕುರಿತು ಉಪನ್ಯಾಸ ನೀಡಿದ ಸೂರ್ಯ ಪುಟ್ಟಸಿದ್ದಿ ಮಾತನಾಡಿ, ಅತಂತ್ಯ ಕಡು ಬಡತನದಲ್ಲಿ ಆದಿವಾಸಿ ಕುಟುಂಬದಲ್ಲಿ ಜನಿಸಿದ ಹುಟ್ಟಿದ ಬಿರ್ಸಾ ಮುಂಡಾ ರವರು ಕೊಳಲು ನುಡಿಸುತ್ತಾ ಜನರನ್ನು ತನ್ನತ್ತಾ ಆಕರ್ಷಿಸುವ ಅಭೂತಪೂರ್ವ ಶಕ್ತಿ ಹೊಂದಿದ್ದರು, ದೂರದೃಷ್ಠಿ ಉಳ್ಳವನಾಗಿದ್ದ ಮುಂಡಾರವರು ಬುಡಕಟ್ಟು ಜನಾಂಗದ ಕಲೆ, ಸಂಸ್ಕೃತಿ, ಅಚಾರ ವಿಚಾರಗಳು ನಶಿಸುವುದನ್ನು ತಡೆದು, ಬ್ರೀಟಿಷರ ದಬ್ಬಾಳಿಕೆ ವಿರೋಧಿಸಿ ತನ್ನ ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಯತ್ನಿಸಿದರು. “ಉಳುವವನೇ ಭೂಮಿಯ ಒಡೆಯನಾಗಬೇಕು ಘೋಷಣೆ ಕೂಗಿ, ಗೇರಿಲ್ಲಾ ಸೈನ್ಯವನ್ನು ನಿರ್ಮಿಸಿ ಬ್ರೀಟಿಷರ ವಿರುದ್ದ ಹೋರಾಟ ಮಾಡುತ್ತಾನೆ. ಬಿರ್ಸಾಮುಂಡಾರವರ ಹೆಸರಿನಲ್ಲಿ ರಾಂಚಿಯಲ್ಲಿ ವಿಮಾನ ನಿಲ್ದಾಣ, ಕೃಷಿ ಕಾಲೇಜು, ಆಟದ ಮೈದಾನಗಳಿವೆ. ಇವರ ಜನ್ಮದಿನವನ್ನು ಜಾಖಂರ್ಡನ ಸಂಸ್ಥಾಪನ ದಿನ ಎಂದು ಕರೆಯುತ್ತಾರೆ ಎಂದರು.   

ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್ ವೈ.ಕೆ. ಸಿದ್ದಿ ಸಮುದಾಯದವರು ಇತರರು ಉಪಸ್ಥಿತರಿದ್ದರು.  

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಿ ನಳಿನಿ ಸ್ವಾಗತಿಸಿದರು. ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕಿ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞೆ ಸ್ವೀಕರಿಸಲಾಯಿತು. ಬುಡಕಟ್ಟು ಕಲಾ ತಂಡದವರಿಂದ ನೃತ್ಯ ಪ್ರದರ್ಶನ ನಡೆಯಿತು..