ಟಿಪ್ಪು ಸುಲ್ತಾನ್ ಜೀವನ ಚರಿತ್ರೆ ಕುರಿತ ಚಿತ್ರ ನಿರ್ಮಾಣ: ಅಹಿಂದ ಮುಖಂಡ ಪ್ರೊ.ಎನ್.ವಿ. ನರಸಿಂಹಯ್ಯ

ಬೆಂಗಳೂರ, ಜ 28  :          ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತು ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶದಿಂದ ಟಿಪ್ಪು ಜೀವನ ಆಧರಿತ ಅದ್ದೂರಿ ಚಿತ್ರ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅಹಿಂದ ಮುಖಂಡ ಹಾಗೂ ಇತಿಹಾಸ ತಜ್ಞ ಪ್ರೊ.ಎನ್.ವಿ. ನರಸಿಂಹಯ್ಯ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸದ ಸತ್ಯಾಸತ್ಯತೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಟಿಪ್ಪು ಸುಲ್ತಾನ್ ಜೀವನಚರಿತ್ರೆ ಆಧಾರಿತ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಲಾಗುವುದು. ಹುತಾತ್ಮ ಟಿಪ್ಪು ಸುಲ್ತಾನ್ ನಾಡಿನ ಒಳಿತಿಗಾಗಿ ತಮ್ಮ ಮಕ್ಕಳನ್ನೇ ಒತ್ತೆ ಇಟ್ಟಿದ್ದ ದೇಶಪ್ರೇಮಿ. ಬ್ರಿಟೀಷ್ ಸಾಮ್ರಾಜ್ಯವನ್ನು ಸಮರ್ಥವಾಗಿ ಎದುರಿಸಿದ ಸಾಹಸಿ. ಮೈಸೂರು ಪ್ರಾಂತ್ಯದಲ್ಲಿ ಕೋಮು ಸೌಹಾರ್ದತೆ ಸ್ಥಾಪಿಸಿದ ಮಾದರಿ ಆಡಳಿತಗಾರ ಎಂದರು. 

ಹಿಂದೂ ದೇವಾಲಯಗಳಿಗೆ ಉತ್ತಮ ಕೊಡುಗೆ ನೀಡಿದ್ದ ಟಿಪ್ಪು ಸುಲ್ತಾನ್ ಕೋಮು ಸಾಮರಸ್ಯಕ್ಕೆ ಮಹತ್ವ ಕೊಡುಗೆ ನೀಡಿದ್ದರು. ಟಿಪ್ಪು ಸಂಪೂರ್ಣ ಜೀವನ ಚರಿತ್ರೆಯುಳ್ಳ ಚಿತ್ರವನ್ನು ತೆರೆಯ ಮೇಲೆ ತರುತ್ತೇವೆ. ಹಿಂದೂ ದೇವಾಲಯಗಳಿಗೆ ಸೂಕ್ತ ರಕ್ಷಣೆ, ಮಠಗಳಿಗೆ ಕೊಡುಗೆ, ಕನ್ನಡ ಭಾಷೆಯಲ್ಲಿ ಶಾಸನಗಳು ಮತ್ತು ಅಭಿವೃದ್ಧಿಗಳಿಗೆ ಅನೇಕ ಕೊಡುಗೆ ನೀಡಿದ್ದಾರೆ. ಟಿಪ್ಪುವಿನ ಧರ್ಮ ಸಹಿಷ್ಣುತೆ ಹಾಗೂ ಅಭಿವೃದ್ಧಿ ಪರ ಉದಾರ ಧೋರಣೆಗಳಿಗೆ ಸಾಕ್ಷಿ ಎಂದರು. 

ಸುದ್ದಿಗೋಷ್ಠಿಯಲ್ಲಿ ಟಿಪ್ಪು ಸುಲ್ತಾನ ಸಂಯುಕ್ತ ರಂಗದ ಮುಖಂಡರು, ಪದಾಧಿಕಾರಿಗಳು ಹಾಗೂ ಚಿತ್ರನಿರ್ದೇಶಕ ಜು.ಶ್ರೀಧರ, ಇನ್ನಿತರರು ಉಪಸ್ಥಿತರಿದ್ದರು.