ಪೊಲೀಸ್ ಠಾಣೆ ಸ್ವಚ್ಛವಾಗಿಲ್ಲದಿದ್ದರೇ, ಅಮಾನತು: ಭಾಸ್ಕರ್ ರಾವ್ ಎಚ್ಚರಿಕೆ

ಬೆಂಗಳೂರು, ಸೆ 10    ನಗರದ ಎಲ್ಲಾ ಪೊಲೀಸ್ ಠಾಣೆಗಳು ಸ್ವಚ್ಛವಾಗಿಲ್ಲದಿದ್ದರೇ, ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡಿ, ಅಮಾನತುಗೊಳಿಸುವುದಾಗಿ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಸೋಮವಾರ ವೈಯಕ್ತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಆಯುಕ್ತರು ಬನಂಕರಿ ಠಾಣೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಠಾಣೆಯ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಪಿಎಸ್ಐ ಹಾಗೂ ಹೆಡ್ ಕಾನ್ಸ್ ಟೇಬಲ್ ಯಾರೂ ಕೂಡ ಕರ್ತವ್ಯದಲ್ಲಿ ಹಾಜರಿರಲಿಲ್ಲ. ಅಲ್ಲದೇ, ಶೌಚಾಲಯ ಹಾಗೂ ಠಾಣೆಯ ಎದುರಿಗಿನ ಅಸ್ವಚ್ಛತೆ ಕಂಡು ಸಿಬ್ಬಂದಿ ವಿರುದ್ಧ ಆಯುಕ್ತರು ಆಕ್ರೋಶಗೊಂಡಿದ್ದಾರೆ. 

ಇನ್ನು 15 ದಿನಗಳಲ್ಲಿ ಠಾಣೆ ಸ್ವಚ್ಛವಾಗಿರಬೇಕು ಎಂದು ಬನಶಂಕರಿ ಪೊಲೀಸರಿಗೆ ಖಡಕ್ ಸೂಚನೆ ನೀಡಿದ ಅವರು, ವಾಕಿಟಾಕಿ ಮೂಲಕ ನಗರದ ಎಲ್ಲಾ ಠಾಣೆಗಳು ಸ್ವಚ್ಛವಾಗಿರಬೇಕು. ಯಾವುದೇ ಕ್ಷಣದಲ್ಲಾದರೂ ತಾವು ಠಾಣೆಗೆ ಭೇಟಿ ನೀಡಬಹುದು. ಠಾಣೆಗಳು ಸ್ವಚ್ಛವಾಗಿಲ್ಲದಿದ್ದರೇ ಅಧಿಕಾರಿಗಳನ್ನೇ ಹೊಣೆ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.