ಬೆಂಗಳೂರು: ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ದೊಡ್ಡ ಮನಸು ಮಾಡಲಿ : ಬಿಜೆಪಿ ಸಂಸದೆ ಶೋಭಾ

ಬೆಂಗಳೂರು ೧೯: ವಿಧಾನಸೌಧದಲ್ಲಿ ಅನಾವಶ್ಯಕ ಗೊಂದಲ  ಗಲಾಟೆ ವಾತಾವರಣ ಸೃಷ್ಟಿಯಾಗಿದೆ. ಸ್ಪೀಕರ್ ರಮೇಶ್ ಕುಮಾರ್ ದೊಡ್ಡಮನಸು ಮಾಡಿ ಶಾಸಕರ ರಾಜೀನಾಮೆ ಸ್ವೀಕಾರ ಮಾಡಿದಲ್ಲಿ ಎಲ್ಲಾ ಗೊಂದಗಳಿಗೆ ಪರಿಹಾರ ದೊರೆಯಲಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲು ಸಭಾಧ್ಯಕ್ಷರು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ.  ಹೀಗಾಗಿ ವಿಧಾನಸಭೆ ಗದ್ದಲದ ಗೂಡಾಗಿದೆ. ವಿಶ್ವಾಸಮತ ನಿರ್ಣಯಕ್ಕೆ ಮುಂದಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಬಹುಮತ ಸಾಬೀತಿನಿಂದ ಪಲಾಯನ ಮಾಡುತ್ತಿದ್ದು, ಬಹುಮತ ನಿರೂಪಿಸಲು ಅವಕಾಶ ಸ್ಪೀಕರ್ ನೀಡಬೇಕೆಂದು ಅವರು ಆಗ್ರಹಿಸಿದರು. 

     ಸರ್ಕಾರದಲ್ಲಿ ಆಡಳಿತ ವ್ಯವಸ್ಥೆಯೇ ಇಲ್ಲ. ರಾಜ್ಯದ ಜನತೆಯ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿರುವ  ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಉದ್ಭವಿಸಿದೆ. ಮೈತ್ರಿ ಸರ್ಕಾರದಲ್ಲಿ ಯಾರಿಗೂ ರಕ್ಷಣೆಯೇ ಇಲ್ಲ. ಗಂಗಾವತಿ ಬೃಂದಾವನ ಮಂಟಪ ಧ್ವಂಸ ಪ್ರಕರಣ ಅವಮಾನಕಾರಿಯಾಗಿದೆ. ಬೃಂದಾವನ ಮಂಟಪದ 29 ಗುಂಟೆ ಜಾಗ ಉಡುಪಿಯ ಉತ್ತರಾಧಿ ಮಠಕ್ಕೆ ಸೇರಿದೆ. ಬೃಂದಾವನ ಧ್ವಂಸ ಪ್ರಕರಣ ನಮ್ಮ ಧರ್ಮಕ್ಕೆ ಮಾಡಿದ ಅವಮಾನ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದರು.