(ವಿಶೇಷ ವರದಿ. ಕೆ. ಎಸ್. ರಾಜಮನ್ನಾರ್)
ಬೆಂಗಳೂರು, ಮಾ, 22 : ರಾಜ್ಯ ರಾಜಕಾರಣದಲ್ಲಿ ದೊಡ್ಡ ಗೌಡರು ಎಂಬ ಕೀರ್ತಿ ಮತ್ತು ಘನತೆ ಸಂಪಾದಿಸಿಕೊಂಡಿರುವ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ರಾಜಕೀಯವಾಗಿ ಗೊಂದಲದಲ್ಲಿ ಇದ್ದಾರೆ.ಅವರ ಮುಂದಿನ ರಾಜಕೀಯ ಹೆಜ್ಜೆಗಳು ಇನ್ನೂ ಅಸ್ಪಷ್ಟವಾಗಿದೆ.
ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಯಾವ ರೀತಿಯ ಕುತೂಹಲ ಕೆರಳಿಸಲಿದೆಯೋ, ದೇವೇಗೌಡರ ಸ್ಪರ್ಧೆಯೂ, ಮುಂದಿನ ನಡೆಯೂ ಕೂಡ ಅಷ್ಟೇ ಕುತೂಹಲಕಾರಿಯಾಗಿದೆ. ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಕೇವಲ ಇನ್ನೂ ಮೂರೇ ದಿನಗಳು ಮಾತ್ರ ಉಳಿದುಕೊಂಡಿವೆ.
ದೇವೇಗೌಡರು ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆಯೇ ? ಒಂದು ವೇಳೆ ಮಾಡುವುದಾದರೆ ಎಲ್ಲಿಂದ? ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ನಂತರ ದೇವೇಗೌಡರ ಸ್ಪರ್ಧೆಯ ಬಗ್ಗೆ ಜನಸಾಮಾನ್ಯರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಬೆಂಗಳೂರು ಉತ್ತರ, ಮಂಡ್ಯ, ಮೈಸೂರು, ತುಮಕೂರು ಕ್ಷೇತ್ರಗಳಿಂದ ದೇವೇಗೌಡರು ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ನಿತ್ಯವೂ ಹರಿದಾಡುತ್ತಲೇ ಇದೆ !.
ಅಂತಿಮವಾಗಿ ಎಲ್ಲಿಂದ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ದೇವೇಗೌಡರು ಸಹ ಸ್ಪಷ್ಟವಾದ ತೀರ್ಮಾನವನ್ನು ಈವರೆಗೂ ಪ್ರಕಟಿಸಿಲ್ಲ. ಈಗ ದೇವೇಗೌಡರು ಚುನಾವಣಾ ಕಣಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬುದು ಕೂಡ ಅಷ್ಟೇ ಕುತೂಹಲ, ರೋಚಕವಾಗಿದೆ. ದೇವೇಗೌಡರ ರಾಜಕೀಯ ನಾಡಿ ಮಿಡಿತವನ್ನು ಬಲ್ಲ ರಾಜಕೀಯ ಪಂಡಿತರ ಪ್ರಕಾರ ಅವರು ಸ್ಪರ್ಧೆ ಮಾಡುವುದಾದರೆ ತುಮಕೂರಿನಿಂದ ಇಲ್ಲವಾದಲ್ಲಿ ಅವರು ಈ ಬಾರಿ ಲೋಕಸಭಾ ಚುನಾವಣಾ ಕಣದಿಂದ ದೂರ ಉಳಿದು ಮೊಮ್ಮಕ್ಕಳು ಮತ್ತು ಇತರ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ತಮ್ಮ ಶಕ್ತಿ ಮತ್ತು ಅನುಭವ ಧಾರೆ ಎರೆಯಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಇನ್ನೂ ದೇವೇಗೌಡರು ಮೀನಮೇಷ ಎಣಿಸಲು ಕಾರಣವೆಂದರೆ ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಮೊಮ್ಮಕ್ಕಳ ಗೆಲುವು ರಾಜಕೀಯವಾಗಿ ಇಳಿ ವಯಸ್ಸಿನ ಗೌಡರಿಗೆ ಅನಿವಾರ್ಯವಾಗಿದೆ.
ತುಮಕೂರಿನಲ್ಲಿ ಸ್ಪರ್ಧೆ ಮಾಡಿದರೂ ನಿರಾಯಾಸ ಗೆಲವು ಸಿಗುತ್ತದೆ ಎಂಬ ಯಾವುದೇ ಖಾತರಿ, ಭರವಸೆ ಅವರಲ್ಲಿ ಮೂಡುತ್ತಿಲ್ಲ ಅವರು ಮುಂದಿನ ಹೆಜ್ಜೆಗಳು ಇನ್ನೂ ನಿಗೂಢವಾಗಿದೆ. ಇನ್ನು ದೇವೇಗೌಡ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಕುಳಿತು ಭಾಷಣ ಮಾಡಿದರೂ ಕೆಳಹಂತದ ಕಾರ್ಯಕರ್ತರ ಭಾವನೆ ಮತ್ತು ಲೆಕ್ಕಾಚಾರಗಳೇ ಬೇರೆಯಾಗಿರುತ್ತದೆ. ಇದು ಕೂಡ ದೇವೇಗೌಡರ ಗೊಂದಲಕ್ಕೆ ಕಾರಣ ಎಂಬುದು ರಾಜಕೀಯ ಪಂಡಿತರ ಅನುಭವದ ಮಾತು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧೆ ಮಾಡಿದರೂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು ಒಟ್ಟಾಗಿ ಸೇರಿ ಕೈ ಕೊಡುತ್ತಾರೋ ಎಂಬ ಅಳುಕು ಸಹ ಇದೆ ಎನ್ನಲಾಗಿದೆ..
ರಾಜಣ್ಣ ಸ್ಪರ್ಧೆ ಗೆಲುವಿಗೆ ವರವಾಗಲಿದೆಯೇ…!!.
ದೇವೇಗೌಡರು ತುಮಕೂರಿನಿಂದ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ಅವರ ವಿರುದ್ಧ ಸ್ಪರ್ಧೆ ಮಾಡುವುದಾಗಿ ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸವಾಲು ಹಾಕಿದ್ದಾರೆ. ದೇವೇಗೌಡರ ಜೊತೆ ರಾಜಣ್ಣ ಕೂಡ ತುಮಕೂರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಇಲ್ಲವೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಅದು ದೇವೇಗೌಡರಿಗೆ ಅನುಕೂಲವಾಗಲಿದೆ. ನಾಯಕ ಸಮುದಾಯದ ಮತಗಳು ವಿಭಜನೆಯಾಗಲಿವೆ. ಒಂದು ವೇಳೆ ರಾಜಣ್ಣ ಕಣಕ್ಕಿಳಿಯದೆ ಹೋದಲ್ಲಿ, ದೇವೇಗೌಡ ಮತ್ತು ಬಿಜೆಪಿಯ ಬಸವರಾಜು ನಡುವೆ ನೇರ ಹಣಾಹಣಿ ಏರ್ಪಡಲಿದೆ. ದೇವೇಗೌಡರು ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಚುನಾವಣಾ ಕಣದಿಂದ ಕೊನೆ ಗಳಿಗೆಯಲ್ಲಿ ದೂರ ಸರಿದರೂ ಅಚ್ಚರಿ ಪಡಬೇಕಾಗಿಲ್ಲ.