ಲೋಕದರ್ಶನ ವರದಿ
ಬಳ್ಳಾರಿ: ಏ.24 ರಂದು ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ
ಬಳ್ಳಾರಿ 21: ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಇದೇ ಏ.24 ರಂದು ಜಿಲ್ಲಾಡಳಿತ ವತಿಯಿಂದ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಸೋಮವಾರ ನಗರದ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಹಾಯಕ ಆಯುಕ್ತರಾದ ಪಿ.ಪ್ರಮೋದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಏ.24 ರಂದು ಬೆಳಿಗ್ಗೆ 09 ಗಂಟೆಗೆ ನಗರದ ಡಾ.ರಾಜ್ ಕುಮಾರ್ ಉದ್ಯಾನವನದ ಬಳಿಯ ಡಾ.ರಾಜ್ ಕುಮಾರ್ ಅವರ ಪುತ್ಥಳಿಗೆ ಗಣ್ಯರಿಂದ ಮಾಲಾರೆ್ಣ ಮಾಡಲಾಗುವುದು. ಬಳಿಕ ಅಂದು ಸಂಜೆ 5 ಗಂಟೆಗೆ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಅವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ರಾಜಕೀಯ ಮುಖಂಡರು, ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪದೇ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಡಾ.ರಾಜ್ ಕುಮಾರ್ ಅವರ ಕನ್ನಡ ಭಾಷಾಭಿಮಾನ, ಕಲಾ ಪ್ರತಿಭೆ ಎಲ್ಲರಿಗೂ ಮನಮುಟ್ಟುವಂತಾದರೆ ಜಯಂತಿ ಆಚರಣೆಗೂ ಅರ್ಥ ಬರುತ್ತದೆ ಎಂದು ಸಹಾಯಕ ಆಯುಕ್ತ ಪಿ.ಪ್ರಮೋದ್ ಅವರು ತಿಳಿಸಿದರು.
ಶಿಷ್ಠಾಚಾರದನ್ವಯ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ, ಕಾರ್ಯಕ್ರಮ ಸ್ಥಳದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ನಗರದ ಡಾ.ರಾಜ್ ಕುಮಾರ್ ಉದ್ಯಾನವನದ ಡಾ.ರಾಜ್ ಕುಮಾರ್ ಅವರ ಪುತ್ಥಳಿಯ ಸುತ್ತಲೂ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಮಾಲಾರೆ್ಣ ಮಾಡಲು ಶಾಶ್ವತ ಏಣಿ ವ್ಯವಸ್ಥೆ ಮಾಡಬೇಕು ಎಂದು ಸಭೆಗೆ ತಿಳಿಸಿದರು.
ನಗರದಲ್ಲಿ ಡಾ.ರಾಜ್ ಕುಮಾರ್ ರಸ್ತೆ ಎಂದು ನಾಮಕರಣಗೊಂಡು 18 ವರ್ಷ ಕಳೆದಿದ್ದು, ಆ ರಸ್ತೆಯ ಪ್ರಾರಂಭದಲ್ಲಿ ಡಾ.ರಾಜ್ ಕುಮಾರ್ ರಸ್ತೆ ಎಂದು ಮಹಾದ್ವಾರ ನಿರ್ಮಿಸಬೇಕು ಎಂದು ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಮಹಾನಗರ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಸಹಾಯಕ ಆಯುಕ್ತ ಪಿ.ಪ್ರಮೋದ್ ಅವರು ತಿಳಿಸಿದರು.
ಡಾ.ರಾಜ್ ಕುಮಾರ್ ಅವರ ಜೀವನ ಚರಿತ್ರೆ ಕುರಿತು ತಿಳಿಸಲು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಆಯೋಜಿಸಬೇಕು. ಕಾರ್ಯಕ್ರಮ ಕುರಿತು ಹೆಚ್ಚಿನ ಪ್ರಚಾರ ನೀಡಲು ನಗರದ ಗಡಿಗಿ ಚೆನ್ನಪ್ಪ ವೃತ್ತ, ಹೆಚ್.ಆರ್.ಗವಿಯಪ್ಪ ವೃತ್ತ ಮತ್ತು ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಬಳಿ ಬ್ಯಾನರ್ ಅಳವಡಿಸಬೇಕು ಎಂದು ಮುಖಂಡರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರ್ಪ, ಕರ್ನಾಟಕ ಯುವ ಸಂಘದ ಗೌರವಾಧ್ಯಕ್ಷ ಸಿರಿಗೇರಿ ಪನ್ನರಾಜ್, ಕರ್ನಾಟಕ ಜನಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.