ಲೋಕದರ್ಶನ ವರದಿ
ಬಳ್ಳಾರಿ 13: ಸರಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸರಕಾರಿ ಸೇವೆಯಲ್ಲಿ ಉತ್ತಮ ಸಂಬಳವನ್ನು ತಜ್ಞ ವೈದ್ಯರು ಮತ್ತು ವೈದ್ಯರಿಗೆ ನೀಡಲಾಗುತ್ತಿದೆ. ಇಲ್ಲಿ ಸಮರ್ಪಕವಾದ ನ್ಯಾಯ ಒದಗಿಸಲು ಸಾಧ್ಯವಾಗದಿದ್ದರೇ ಸೇವೆ ತ್ಯಜಿಸಿ ಹೋಗಿ ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಸರಕಾರಿ ಆಸ್ಪತ್ರೆಗಳಲ್ಲಿಯೂ ಸೇವೆ ಸಲ್ಲಿಸುತ್ತಾ, ಖಾಸಗಿ ಕ್ಲಿನಿಕ್ಗಳನ್ನು ನಡೆಸುತ್ತಿರುವುದು ಕಂಡುಬಂದರೇ ಕಠಿಣ ಕ್ರಮಗಳನ್ನು ಅವರ ಮೇಲೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರದ ವಾಲ್ಮೀಕಿ ವೃತ್ತದಲ್ಲಿರುವ(ಎಸ್ಪಿ ಸರ್ಕಲ್) ಶ್ರೀ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿ ನಮಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ನಮ್ಮ ಸಮುದಾಯದ ಶಾಸಕರು ಶ್ರಮಿಸಲಿದ್ದೇವೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು ಅವರು ಈ ಸಮುದಾಯಕ್ಕೆ ಶೇ.7.5ರಷ್ಟು ಮಿಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಕಳೆದ ಸರಕಾರದಲ್ಲಿ ರಚಿಸಲಾದ ನ್ಯಾ.ನಾಗಮೋಹನದಾಸ್ ನೇತೃತ್ವದ ಸಮಿತಿಗೆ ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಜನಸಂಖ್ಯೆ ಆಧರಿಸಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಗುವುದು ಮತ್ತು ಈ ಮೂಲಕ ಬಹುದಿನಗಳ ಬೇಡಿಕೆ ಈಡೇರಿಸಲಾಗುವುದು ಎಂದರು.
ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ ಆತ್ಮಹತ್ಯೆಗೂ ನಮ್ಮ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು ನ್ಯಾಯಯುತ ತನಿಖೆಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್ ಸೇರಿದಂತೆ ವಿವಿಧ ಮುಖಂಡರು ಇದ್ದರು.