ಸುವಾ, ಏ 2, ಫಿಜಿ ರಾಜಧಾನಿ ಸುವಾದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಲಾಕ್ ಡೌನ್ ಜಾರಿಯಾಗಲಿದೆ ಎಂದು ಫಿಜಿ ಗುರುವಾರ ಘೋಷಿಸಿದೆ. ಹೊಸದಾಗಿ ಎರಡು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.ಟಿವಿ ವಾಹಿನ ಮೂಲಕ ಮಾತನಾಡಿದ ಫಿಜಿ ಪ್ರಧಾನಿ ವೋರೆಕೆ ಬೈನೈಮರಾಮಾ, ದೇಶದಲ್ಲಿ ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 21 ವರ್ಷದ ಮಹಿಳೆ ಮತ್ತು ಆಕೆಯ 33 ವರ್ಷದ ಪತಿಯಲ್ಲಿ ಸೋಂಕು ಖಚಿತವಾಗಿದೆ. ಇವರು ಸುವಾ ಪ್ರದೇಶಕ್ಕೆ ಸೇರಿದವರಾಗಿದ್ದು ಅಲ್ಲಿಂದ 39 ಕಿಲೋಮೀಟರ್ ಪಶ್ಚಿಮಕ್ಕಿರುವ ಆಸ್ಪತ್ರೆಯಲ್ಲಿ ಇವರುಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಸೋಂಕಿತರಿಬ್ಬರೂ ಕೇಶವಿನ್ಯಾಸಕರು. ಮಹಿಳೆಯಲ್ಲಿ ಶನಿವಾರ ಸೋಂಕಿನ ಲಕ್ಷಣಗಳು ಕಂಡುಬಂದಿದು ಅವರು ಫಿಜಿ ಆರೋಗ್ಯ ಸಚಿವಾಲಯಕ್ಕೆ ಏ 1 ರಂದು ಮಾಹಿತಿ ನೀಡಿದ್ದಾರೆ. ಆರೋಗ್ಯ ಕಾರ್ಯಕರ್ತರ ತಂಡ ಅಂದೇ ಅವರ ನಿವಾಸಕ್ಕೆ ತೆರಳಿ ಪರೀಕ್ಷಿಸಿದೆ. ಆಕೆಯ ಪತಿಯಲ್ಲಿ ಮಾರ್ಚ್ 31 ರಂದೇ ಲಕ್ಷಣಗಳು ಕಂಡುಬಂದಿದ್ದು ಅವರನ್ನು ಸಹ ಅಂದೇ ಪರೀಕ್ಷೆ ಒಳಪಡಿಸಲಾಯಿತು. ಸೋಂಕು ಪತ್ತೆಯಾಗಿರುವ ಕಾರಣ ಸುವಾ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಆರಂಭವಾಗಿ 14 ದಿನಗಳವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ ಎಂದು ಪ್ರಧಾನಿ ಹೇಳಿದ್ದಾರೆ.ಶುಕ್ರವಾರದಿಂದ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದರು.ಫಿಜಿಯ ಲೌಟೋಕಾದಲ್ಲಿ ಮಾರ್ಚ್ 19 ರಂದು ಮೊದಲ ಕೊರೊನಾ ಸೋಂಕು ದೃಢಪಟ್ಟಿದ್ದು ಅಂದಿನಿಂದಲೇ ಆ ನಗರದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಯಿತು.