ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಜಾಗೃತಿ ವಹಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಮನವಿ

ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಜಾಗೃತಿ ವಹಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಮನವಿ Be aware to protect yourself from the heat of the sun: DHO Dr. Yalla Ramesh Babu appeals

ಲೋಕದರ್ಶನ ವರದಿ 

ಬಳ್ಳಾರಿ,ಏ.17: ಜಿಲ್ಲೆಯಾದ್ಯಂತ ಬೇಸಿಗೆಯ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಬಿಸಿಲಿನ ಶಾಖಾಘಾತಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. 

ಸಿರುಗುಪ್ಪ ತಾಲ್ಲೂಕಿನ ಚಿಕ್ಕ ಬಳ್ಳಾರಿ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಅವರು, ಗರ್ಭಿಣಿಯರು ಮತ್ತು ಮಕ್ಕಳ ಮನೆಗಳಿಗೆ ಖುದ್ದು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಬಿಸಿಲಿನ ಪ್ರಖರತೆಯಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು. 

*ಮಧ್ಯಾಹ್ನ ಹೊರಗೆ ಬರಬೇಡಿ:* 

ತೀವ್ರ ಬಿಸಿಲಿರುವ ಹಿನ್ನಲೆಯಲ್ಲಿ ಮಧ್ಯಾಹ್ನ 12 ರಿಂದ ಸಂಜೆ 04 ಗಂಟೆಯವರೆಗೆ ತಾಯಂದಿರು, ವಯೋವೃದ್ಧರು ಮತ್ತು ಮಕ್ಕಳು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಹೊರಬರುವಾಗ ಛತ್ರಿ ಬಳಸಬೇಕು ಹಾಗೂ ಕುಡಿಯುವ ನೀರನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಮಕ್ಕಳನ್ನು ಕರೆದೊಯ್ಯುವಾಗ ಅವರ ತಲೆಯ ಮೇಲೆ ಒದ್ದೆಯಾದ ಬಟ್ಟೆಯನ್ನು ಹಾಕಿ ಬಿಸಿಲಿನ ತಾಪ ತಗುಲದಂತೆ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು. 

*ಅಪಾಯದ ಲಕ್ಷಣಗಳು:* 

ವಯಸ್ಕರಲ್ಲಿ ಅರೆಪ್ರಜ್ಞಾವಸ್ಥೆ, ಅತಿಯಾದ ತಲೆನೋವು, ತಲೆಸುತ್ತುವಿಕೆ, ಕೆಂಪಾದ ಒಣ ಚರ್ಮ, ಸ್ನಾಯುಗಳ ಸೆಳೆತ ಹಾಗೂ ವಾಂತಿ ಕಂಡುಬರಬಹುದು. ಮಕ್ಕಳು ಆಹಾರ ಸೇವಿಸಲು ನಿರಾಕರಿಸುವುದು, ಕಡಿಮೆ ಮೂತ್ರ ವಿಸರ್ಜನೆ, ಬಾಯಿ ಒಣಗುವಿಕೆ, ಆಲಸ್ಯ ಹಾಗೂ ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ಕಾಣಬಹುದು ಎಂದು ಅವರು ತಿಳಿಸಿದರು. 

ಹಾಗಾಗಿ ಯಾರಾದರೂ ಬಿಸಿಲಿನಿಂದ ಪ್ರಜ್ಞೆ ತಪ್ಪಿದರೆ ತಕ್ಷಣ ಅವರನ್ನು ನೆರಳಿರುವ ಜಾಗಕ್ಕೆ ಸ್ಥಳಾಂತರಿಸಿ, ಬಟ್ಟೆಗಳನ್ನು ಸಡಿಲಗೊಳಿಸಿ ಕಾಲುಗಳನ್ನು ಎತ್ತರಿಸಿ ಮಲಗಿಸಬೇಕು. ತಣ್ಣೀರಿನಿಂದ ದೇಹವನ್ನು ಒರೆಸಿ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು ಎಂದರು. 

*ಮಾಡಬೇಕಾದ ಕಾರ್ಯ:* 

ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯಿರಿ. ಮನೆಯಲ್ಲಿ ತಯಾರಿಸಿದ ಮಜ್ಜಿಗೆ, ಲಿಂಬೆ ಶರಬತ್ತು, ಎಳೆನೀರು ಹಾಗೂ ಹಣ್ಣಿನ ರಸಗಳನ್ನು ಸೇವಿಸಿ. ಕಲ್ಲಂಗಡಿ, ಕಿತ್ತಳೆ, ಸೌತೆಕಾಯಿಯಂತಹ ಹಣ್ಣುಗಳನ್ನು ಹೆಚ್ಚು ಬಳಸಿ. ತಿಳಿ ಬಣ್ಣದ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಾಂಗಣದ ಕೆಲಸಗಳನ್ನು ಬೆಳಿಗ್ಗೆ 11 ಗಂಟೆಯೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದರು. 

ಬಾಯಾರಿಕೆಯು ನಿರ್ಜಲಿಕರಣದ ಲಕ್ಷಣವಾಗಿದೆ. ಪ್ರಯಾಣ ಮಾಡುವ ಸಮಯದಲ್ಲಿ ಸಹ ಕುಡಿಯುವ ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯ. ಓಆರ್‌ಎಸ್ ಜೀವಜಲ ಸೇವನೆ ಮಾಡಬೇಕು. ಮನೆಯಲ್ಲಿಯೇ ಸಿದ್ದಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ. ಪ್ರಸ್ತುತ ಋತುಮಾನದ ಹಣ್ಣುಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್ ಹಾಗೂ ಸೌತೆಕಾಯಿ, ಎಳೆನೀರು ಹೆಚ್ಚು ಸೇವಿಸಬೇಕು. 

*ಮಾಡಬಾರದು:* 

ಬರಿಗಾಲಿನಲ್ಲಿ ಹೊರಗೆ ಹೋಗಬೇಡಿ. ಮದ್ಯಪಾನ, ಟೀ, ಕಾಫಿ ಹಾಗೂ ಅತಿಯಾದ ಸಕ್ಕರೆ ಅಂಶವಿರುವ ಪಾನೀಯಗಳನ್ನು ಸೇವಿಸಬೇಡಿ. ರಸ್ತೆ ಬದಿಯ ಕತ್ತರಿಸಿಟ್ಟ ಹಣ್ಣುಗಳನ್ನು ಮತ್ತು ಕಲುಷಿತ ನೀರನ್ನು ಕುಡಿಯಬೇಡಿ. ಮಧ್ಯಾಹ್ನದ ವೇಳೆ ಅಡುಗೆ ಮನೆಯಲ್ಲಿ ಕಿಟಕಿ-ಬಾಗಿಲುಗಳನ್ನು ಮುಚ್ಚಿ ಅಡುಗೆ ಮಾಡಬಾರದು. 

ಗರ್ಭಿಣಿ ಮಹಿಳೆಯರು ಆರೋಗ್ಯ ಸಮಸ್ಯೆಯಿಂದ ಬಳಲುವವರು ಮತ್ತು ನಿಗಧಿತ ಸಮಸ್ಯೆಗಳಿಗೆ ಓಷಧಿಗಳನ್ನು ತೆಗೆದುಕೊಳ್ಳುವವರು ವೈದ್ಯರ ಸಲಹೆ ಮೇರೆಗೆ ಮನೆಯ ಹೊರಗಡೆ ಕೆಲಸ ಮಾಡಲು ಆದ್ಯತೆ ನೀಡಬೇಕು. ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ಧೀಕರಿಸದೇ ಇರುವ ಅಥವಾ ಕೆರೆ, ಕುಂಟೆಗಳ ನೀರನ್ನು ನೇರವಾಗಿ ಕುಡಿಯಬಾರದು ಎಂದು ತಿಳಿಸಿದರು. 

ದೇಹದಲ್ಲಿ ನಿರ್ಜಲೀಕರಣ ತಡೆಗಟ್ಟಲು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಓ.ಆರ್‌.ಎಸ್ ಜೀವಜಲ ಪುಡಿ ಅಗತ್ಯವುಳ್ಳವರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಆರೈಕೆಗಾಗಿ, ಐವಿ ಪ್ಲೂಯಿಡ್ಸ್‌ ಮತ್ತು ಜೀವರಕ್ಷಕ ಓಷಧಗಳ ದಾಸ್ತಾನು ಇಟ್ಟುಕೊಳ್ಳಲಾಗಿದೆ. ಒಂದು ಲೀಟರ್ ನೀರಿಗೆ ಒಂದು ಪ್ಯಾಕೆಟ್ ಓ.ಆರ್‌.ಎಸ್ ಪುಡಿ ಬೆರೆಸಿ 24 ಗಂಟೆಯೊಳಗೆ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಟಿ.ವಿರೂಪಾಕ್ಷಿ. ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎಂ.ರವಿಕುಮಾರ್, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಎಲ್ಲಪ್ಪ,  ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಲಿಂಗರಾಜ್, ರಾಚೋಟಯ್ಯ ಸ್ವಾಮಿ, ಪ್ರಾಥಮಿಕ ಸುರಕ್ಷಾ ಅಧಿಕಾರಿ ಮಹಾಲಕ್ಷ್ಮಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.