ಮಾಜಿ ಸಚಿವ ವಿನಯ ಕುಲಕರ್ಣಿ ಬೆಂಬಲಿಗರಿಂದ ಗೂಂಡಾಗಿರಿ

ಧಾರವಾಡ: ತಾಲೂಕಿನ ಗರಗ ಗ್ರಾಮ ಪಂಚಾಯಿತಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ  ಅವರ ಬಲಗೈ ಬಂಟನಾಗಿರುವ ಉಳವಯ್ಯ ಚಿಕ್ಕಮಠ ಅಲಿಯಾಸ್ ಚಿಕ್ಕೊಪ್ಪ ಹಾಗೂ ಗರಗ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡನಾಗಿರುವ ಉದ್ದಪ್ಪ ಅಲಿಯಾಸ್ ರುದ್ರಪ್ಪ ಉಳವಣ್ಣವರ ಹಾಗೂ ಬೆಂಬಲಿಗರ ಉಪಟಳ ಗರಗ ಗ್ರಾಮದಲ್ಲಿ ವಿಪರೀತ ಹೆಚ್ಚಳವಾಗಿದೆ.

ಗರಗ ಗ್ರಾಮದಲ್ಲಿ ಮನಬಂದಂತೆ ದೌರ್ಜನ್ಯ ನಡೆಸುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ, ಮಾರಣಾಂತಿಕ ಹಲ್ಲೆ, ಕೊಲೆ ಯತ್ನ, ದೌರ್ಜನ್ಯಗಳನ್ನು ಎಸಗುತ್ತಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಧಾರವಾಡ ತಾಲೂಕಿನ ಗರಗ ಗ್ರಾಮದ ಮೂಲ ನಿವಾಸಿ ಹಾಗೂ ಹಾಲಿ ವಸತಿ ಬೆಳಗಾವಿಯ ಗಾಂಧಿ ನಗರದ ಬ್ರಿಡ್ಜ್ ಬಳಿ ವಾಸಿಸುತ್ತಿರುವ ಮಡಿವಾಳ ಅಶೋಕ್ ರಾಯಭಾಗಕರ್ ನನ್ನು ಜೂನ್ 16ರಂದು ಬೆಳಗಾವಿಯಿಂದ ಧಾರವಾಡಕ್ಕೆ ಕಿಡ್ನಾಪ್ ಮಾಡಿಕೊಂಡು ಬಂದು ಮಾರಣಾಂತಿಕ ಹಲ್ಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ ತಾಲೂಕಿನ ಗರಗ ಗ್ರಾಮ ಪಂಚಾಯಿತಿ ಸದಸ್ಯ ಉಳವಯ್ಯ ಚಿಕ್ಕಮಠ ಅಲಿಯಾಸ್ ಚಿಕ್ಕೊಪ್ಪ ಹಾಗೂ  ಉದ್ದಪ್ಪ ಅಲಿಯಾಸ್ ರುದ್ರಪ್ಪ ಉಳವಣ್ಣವರ, ಅಪ್ಪಾಸಾಬ ನದಾಫ್, ಸಾ. ಗರಗ, ಸಿದ್ದಯ್ಯ ಚಿಕ್ಕೊಪ್ಪ ಅಲಿಯಾಸ್ ಚಿಕ್ಕಮಠ, ಮಡಿವಾಳಪ್ಪ ಕಾಳಿ, ಪೀರಜಾದೆ ಗುಲಾಬ ಗರಗದ ಇವರೆಲ್ಲಾ ಕೂಡಿಕೊಂಡು ಜೂನ್ 16ರಂದು ಬೆಳಗಾವಿಯ ಗಾಂಧಿನಗರದ ಬ್ರಿಜ್ ಬಳಿ 8867605095 ಮೊಬೈಲ್ ನಿಂದ  ಕರೆ ಮಾಡಿ ಮಡಿವಾಳ ರಾಯಭಾಗಕರ್ ಎಂಬ ಯುವಕನನ್ನು ಕರೆಸಿಕೊಂಡು ಬೋಲೋರೋ ವಾಹನದಲ್ಲಿ ಕಿಡ್ನಾಪ್ ಮಾಡಿದ್ದಾರೆ.

ಆತನನ್ನು ಬೆಳಗಾವಿಯಿಂದ ಗರಗ ರಸ್ತೆಯ ಹೊಲವೊಂದರಲ್ಲಿ ಕೈ ಕಾಲುಗಳನ್ನು ಕಟ್ಟಿ ಕೂಡಿ ಹಾಕಿದ್ದಾರೆ. ಆತನ ಎರಡು ಕಾಲುಗಳ ತೊಡೆಯ ಮೇಲ್ಭಾಗದಲ್ಲಿ ವಿದ್ಯುತ್ ಶಾಕ್ ನೀಡಿದ್ದಾರೆ. ಇದರಿಂದಾಗಿ ತೊಡೆಗಳ ಮೇಲಭಾಗಗಳು ಸುಟ್ಟ ಗಾಯಗಳಾಗಿವೆ. 

ಅಲ್ಲದೆ, ಜೂನ್ 17ರಂದು ಧಾರವಾಡಕ್ಕೆ ಕರೆದುಕೊಂಡು ಹೋಗಿ ಮಡಿವಾಳ ರಾಯಭಾಗಕರ್ ಹೆಸರಿನಲ್ಲಿದ್ದ 6 ಲಕ್ಷ 80 ಸಾವಿರ ಮೌಲ್ಯದ ಎರಡು ಗುಂಟೆ ಜಾಗವನ್ನು ಕಾಂಗ್ರೆಸ್ ಮುಖಂಡ ರುದ್ರಪ್ಪ ಮಡಿವಾಳಪ್ಪ ಉಳವಣ್ಣವರ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. 

ಎರಡು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗನನ್ನು ನಂತರ ಮಡಿವಾಳ ರಾಯಭಾಗಕರ ತಂದೆ ಅವರು ದಯಾನಂದ ಕಾಂಬಳೆ ಅವರು ವಿಚಾರಿಸಿದ ಮೇಲೆ ಉಳವಯ್ಯ ಚಿಕ್ಕಮಠ ಅಲಿಯಾಸ್ ಚಿಕ್ಕೊಪ್ಪ ಕಿಡ್ನಾಪ್ ಮಾಡಿ ತಂದು ಬಡಿದಿರುವುದಾಗಿ ಒಪ್ಪಿಕೊಂಡು ತಂದೆ ಜೊತೆಗೆ ಬೆಳಗಾವಿಗೆ ಮರಳಿ ಕಳುಹಿಸಿ ಕೊಟ್ಟಿದ್ದಾರೆ.

ಅಲ್ಲದೆ, ಈ ಬಗ್ಗೆ ಯಾರಿಗಾದರೂ ಬಾಯಿ ಬಿಟ್ಟರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಕಂಗಲಾದ ಕುಟುಂಬ ಈ ಕುರಿತು ದೂರು ನೀಡಿರಲಿಲ್ಲ. ಆದರೆ ಆತನ ಸ್ಥಿತಿ ಗಂಭೀರವಾಗಿರುವುದನ್ನು ಅರಿತು,  ಅವನಿಗೆ ಸರಿಯಾಗಿ ನಡೆದಾಡಲು ಬರುತ್ತಿರಲಿಲ್ಲ. ಹೀಗಾಗಿ ಜೂನ್ 19ರಂದು ಬೆಳಗಾವಿಯ ಲೇಕ್ ವ್ಯೂವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. 

ಅಲ್ಲಿಯ ವೈದ್ಯರ ಸಲಹೆ ಮೇಲೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.  ಸದ್ಯ ಮಡಿವಾಳ ಅಶೋಕ ರಾಯಭಾಗಕರ ಸ್ಥಿತಿ ಚಿಂತಾಜನಕವಾಗಿದೆ. ಐಸಿಯೂನಲ್ಲಿದ್ದು, ವೈದ್ಯರು ಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಅಲ್ಲದೆ, ಆತನಿಗೆ ವಿದ್ಯುತ್ ಶಾಖ್ ಕೊಟ್ಟಿದ್ದರಿಂದ ಎರಡು ಕಿಡ್ನಿಗಳು ಫೇಲ್ ಆಗಿವೆ. ಹೀಗಾಗಿ ಯಾವುದೇ ಭರವಸೆ ನೀಡಲು ಆಗಲ್ಲ ಎಂದು ವೈದ್ಯರು ಹೇಳಿದ್ದಾರೆ.

ಈ ಮಾಹಿತಿ ಅರಿತು ಸೋಮವಾರ ಬೆಳಗಾವಿಯ ಲೇಕ್ ವ್ಯೂವ್ ಆಸ್ಪತ್ರೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ಭೇಟಿ ನೀಡಿ, ಆತನ ಯೋಗಕ್ಷೇಮ ವಿಚಾರಿಸಿ, ವಸ್ತುಸ್ಥಿತಿಯನ್ನು ಸಂಗ್ರಹಿಸಿದರು. ಅಲ್ಲದೆ, ಆತನ ಕುಟುಂಬಕ್ಕೆ ಧೈರ್ಯ ಸಾಂತ್ವನ ಹೇಳಿದರು.

ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದಲ್ಲದೆ, ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು. ಮಗನ ಆರೋಗ್ಯ ಸುಧಾರಣೆಗೆ ಗಮನ ಹರಿಸಿ ಎಂದು ಪೋಷಕರಿಗೆ ಸ್ಥೈರ್ಯ ತುಂಬಿದರು. ತಂದೆ ತಾಯಿ ಕಣ್ಣೀರು ಸುರಿಸಿ, ತಮ್ಮ ಮಗನಿಗಾದ ನೋವನ್ನು ತೋಡಿಕೊಂಡರು.

 ಬಳಿಕ ಬೆಳಗಾವಿಯ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ ಕುಮಾರ ಅವರನ್ನು ಬೆಳಗಾವಿಯ ಶಾಸಕ ಅನಿಲ ಬೆನಕೆ ಅವರೊಂದಿಗೆ ತೆರಳಿ ಶಾಸಕ ಅಮೃತ ದೇಸಾಯಿ ಅವರು ಭೇಟಿ ಮಾಡಿ ವಸ್ತುಸ್ಥಿತಿಯನ್ನು ವಿವರಿಸಿದರು. ಮಡಿವಾಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತಕ್ಷಣ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಮೃತ ದೇಸಾಯಿ ಮಾಜಿ ಸಚಿವ ವಿನಯ ಕುಲಕರ್ಣಿ  ಬಂಟರಾದ ಉಳವಯ್ಯ ಚಿಕ್ಕೊಪ್ಪ ಹಾಗೂ ರುದ್ರಪ್ಪ ಉಳವಣ್ಣವರ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು. ಗೃಹ ಸಚಿವ ಎಂ.ಬಿ. ಪಾಟೀಲ ನಮ್ಮವರು ಎಂಬ ಭರವಸೆ ಮೇರೆಗೆ ಅವರು ಹಾರಾಡುತ್ತಿದ್ದಾರೆ. ಅವರಿಗೆ ಕಡಿವಾಣ ಹಾಕಬೇಕು. ರಾಜಕೀಯ ಒತ್ತಡಗಳಿಗೆ ಪೊಲೀಸರು ಮಣಿಯಬಾರದು ಎಂದು ಆಗ್ರಹಿಸಿದರು. 

ಶಾಸಕ ಅಮೃತ ದೇಸಾಯಿ ಅವರು ಬೆಳಗಾವಿಯ ಉತ್ತರ ವಲಯ ಪೊಲೀಸ್ ಮಹಾನಿರ್ದೇಶಕ  ರಾಘವೇಂದ್ರ ಸುಹಾಸ್ ಅವರನ್ನು ಭೇಟಿಯಾಗಿ ಗರಗ ಪೊಲೀಸ್ ಠಾಣೆಯ ಪಿಎಸ್ಐ  ಈರಯ್ಯ ಮಠಮತಿ ವಿರುದ್ಧ ದೂರು ನೀಡಿದ್ದರು.  ಈ ಬಗ್ಗೆ 2018ರಲ್ಲಿಯೇ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸದ ಹಿನ್ನಲೆಯಲ್ಲಿ ಯುವಕ ಮಡಿವಾಳ ರಾಯಭಾಗಕರ್ ಸ್ಥಿತಿ ಚಿಂತಾಜನಕವಾಗಿದೆ. ಸಾವು ಬದುಕಿನ ನಡುವೆ ಹೋರಾಡುವ ಮಟ್ಟಕ್ಕೆ ಬಂದು ನಿಂತಿದೆ. ಈ ಬಗ್ಗೆ ಎಸ್ಪಿ ಅವರಿಗೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.

ಈ ಸಂಬಂಧ ಕೂಡಲೇ ಆರೋಪಿಗಳನ್ನು ಬಂಧಿಸಲು ಹಾಗೂ ಉಳವಯ್ಯ ಚಿಕ್ಕಮಠ ಅಲಿಯಾಸ್ ಚಿಕ್ಕೊಪ್ಪ ಹಾಗೂ ಉದ್ದಪ್ಪ ಅಲಿಯಾಸ್ ರುದ್ರಪ್ಪ ಉಳವಣ್ಣವರ ಅವರ ಬಳಿಯಿರುವ ಗನ್ ಲೈಸನ್ಸ್ ಪರವಾನಿಗೆ ರದ್ದು ಪಡಿಸಲು ಅಧೀನ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಗರಗ ಪಿಎಸ್ಐ ಈರಯ್ಯ ಮಠಪತಿ ಅವರ ಕುರಿತು ಇಲಾಖೆ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.