ಬಳ್ಳಾರಿ/ಹೊಸಪೇಟೆ,ಜು.06: ಸದ್ಯ ಕೋವಿಡ್-19 ನಗರದಲ್ಲೂ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಸುರಕ್ಷತೆಯಿಂದ ಇರಬೇಕು ಎಂದು ತಹಶೀಲ್ದಾರ್ ಹೆಚ್.ವಿಶ್ವನಾಥ್ ಅವರು ತಿಳಿಸಿದ್ದಾರೆ.
ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ಕೋವಿಡ್-19 ಕುರಿತಂತೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಹೊಸಪೇಟೆಯಲ್ಲಿ 170ಕ್ಕೂ ಹೆಚ್ಚಿನ ಜನರಿಗೆ ಸೋಂಕು ಕಾಣಿಸಿದ್ದು, ದಿನಕ್ಕೆ 30 ರಿಂದ 40 ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಿ ಜಾಗೃತಿಯಿಂದ ಇರಬೇಕು. ನಗರಕ್ಕೆ ಅನ್ಯಜಿಲ್ಲೆಯ ಜೊತೆಗೆ ಸೋಂಕಿತ ಪ್ರದೇಶಗಳಿಂದಲೂ ವ್ಯಕ್ತಿಗಳು ಆಗಮಿಸುತ್ತಿದ್ದು; ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಬರಬಾರದು, ಚಿಕ್ಕಮಕ್ಕಳು ಮತ್ತು ವಯೋವೃದ್ಧರನ್ನು ಹೊರಗಡೆ ಕಳಿಸಬಾರದು. ತರಕಾರಿ ವ್ಯಾಪಾರಕ್ಕೆಂದು ವಿವಿಧ ಭಾಗದಿಂದ ವ್ಯಾಪರಸ್ಥರು ಸಹ ಆಗಮಿಸುತ್ತಿದ್ದು, ತರಕಾರಿ ಕೊಳ್ಳಲು ಪ್ರತಿ ಮನೆಯಿಂದ ಒಬ್ಬ ವ್ಯಕ್ತಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸಬೇಕು ಎಂದರು.
ಕಂಟೈನ್ಮೆಂಟ್ ಹಾಗೂ ಬಫರ್ ವಲಯಗಳಲ್ಲಿ ಕ್ವಾರಂಟೈನ್ ಒಳಪಟ್ಟ ರೋಗಿಗಳು ಹಾಗೂ ಪ್ರಥಮ ಸೋಂಕಿತರು ಓಡಾಡುವ ಕುರಿತು ಮಾಹಿತಿ ಸಿಗುತ್ತಿದ್ದು, ಕ್ವಾರಂಟೈನ್ ಅವಧಿ ಮುಗಿದು ತಪಾಸಣೆ ಪೂರ್ಣಗೊಳ್ಳುವವರೆಗೂ ಹೊರಗಡೆ ಬರಬಾರದು. ಜಿಲ್ಲೆಯಲ್ಲೇ ಹೆಚ್ಚು ಸೋಂಕಿತ ವಲಯಗಳಿಂದ ಜನರು ತಾಲೂಕಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಗಾಭರಿಗೊಳ್ಳುವ ಅವಶ್ಯಕತೆ ಇಲ್ಲ ಸಾರ್ವಜನಿಕ ಅಂತರ ಕಾಯ್ದುಕೊಂಡು ಅಗತ್ಯ ಕಾರ್ಯಗಳಿದ್ದಲ್ಲಿ ಮಾತ್ರ ಹೊರಬನ್ನಿ ವಿನಾ ಕಾರಣ ಮನೆಯಿಂದ ಹೊರಬರಬೇಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಹೊರಬನ್ನಿ ನಿಯಮಿತವಾಗಿ ಸ್ಯಾನಿಟೈಸರ್ ಬಳಸಿ ಸುರಕ್ಷತೆಯಿಂದಿರಿ ಹಾಗೂ ಆರೋಗ್ಯದಿಂದಿರಿ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ