ಸಮಾನತೆ-ಸೌಹಾರ್ದದ ಸಂದೇಶ ಹರಡಿದ ಬಸವಣ್ಣ: ಡಾ. ಸುಧಾ ಕೌಜಗೇರಿ

ಸಮಾನತೆ-ಸೌಹಾರ್ದದ ಸಂದೇಶ ಹರಡಿದ ಬಸವಣ್ಣ: ಡಾ. ಸುಧಾ ಕೌಜಗೇರಿ Basavanna spread the message of equality and harmony: Dr. Sudha Kaujageri

ಲೋಕದರ್ಶನ ವರದಿ

ಕೊಪ್ಪಳ 21 : ವಿಶ್ವಗುರು ಬಸವಣ್ಣನವರ ಚಿಂತನೆಗಳು ಕಾಲಾತೀತವಾಗಿದ್ದು, ಇಂದಿನ ಸಮಾಜಕ್ಕೂ ಸಮಾನವಾಗಿ ಪ್ರಸ್ತುತವಾಗಿವೆ ಎಂದು ಪ್ರಾಚಾರ್ಯೆ ಡಾ. ಸುಧಾ ಕೌಜಗೇರಿ ಹೇಳಿದರು. ಅವರು ಹುಲಕೋಟಿಯ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಬಸವಣ್ಣನವರ ಚಿಂತನೆಗಳು ಕೇವಲ ಒಂದು ಕಾಲಕ್ಕೆ, ಜನಾಂಗಕ್ಕೆ, ಪ್ರದೇಶಕ್ಕೆ ಸೀಮಿತವಾಗಿಲ್ಲ, ಅವು ಸರ್ವಕಾಲಕ್ಕೂ, ಸರ್ವರಿಗೂ ಸರ್ವಪ್ರದೇಶಗಳಿಗೂ ಮಾರ್ಗದರ್ಶನ ನೀಡುವ ಶಕ್ತಿಯನ್ನು ಹೊಂದಿದ್ದು, ಆಸ್ತೇಯ, ದಯೆ, ಸಹಿಷ್ಣುತೆ, ಅಪರಿಗ್ರಹ, ದಾನ, ಸೇವೆ, ಸ್ವಾಭಿಮಾನ, ತ್ಯಾಗ, ಸಹಕಾರ, ಸಹಬಾಳ್ವೆ, ಐಕ್ಯತೆ, ಮಿತೃತ್ವ, ಭ್ರಾತೃತ್ವ, ನ್ಯಾಯ, ಶ್ರದ್ಧೆ, ಬಂಧುತ್ವ, ಬದ್ಧತೆ, ಪ್ರಾಮಾಣಿಕತೆ, ಸ್ನೇಹ, ವಾತ್ಸಲ್ಯ, ಓದಾರ್ಯ, ಪಾವನತೆ, ಛಲ, ಸ್ವಂತಿಕೆ, ಸಮಾನತೆ, ಸತ್ಯ, ಅಹಿಂಸೆ, ಶ್ರಮದ ಮಹತ್ವವನ್ನು ಸಾರುವ ಅವರ ತತ್ವಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು. 

ಎನ್‌.ಎಸ್‌.ಎಸ್‌. ಘಟಕದ ಸಂಯೋಜಕ ಮತ್ತು ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿ ಅಸಮಾನತೆ, ಅಂಧಶ್ರದ್ಧೆ, ಅಕ್ರಮಗಳಿಗೆ ವಿರುದ್ಧವಾಗಿ ಹೋರಾಡಬೇಕೆಂಬ ಸಂದೇಶ ನೀಡಿದ್ದು, ಪ್ರತಿಯೊಬ್ಬರೂ ಕಾಯಕವೇ ಕೈಲಾಸ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬನೆಯಿಂದ ನ್ಯಾಯಾರ್ಜಿತವಾಗಿ ಸಂಪಾದಿಸಿದ ಸಂಪಾದನೆಯಲ್ಲಿ ಕೆಲವು ಭಾಗವನ್ನು ದಾಸೋಹ ರೂಪದಲ್ಲಿ ಪ್ರೀತಿಯಿಂದ ಹಂಚಿದರೆ ಬಸವಣ್ಣನವರ ಸಮಸಮಾಜ ನಿರ್ಮಾಣದ ಆಶಯ ಪರಿಪೂರ್ಣವಾಗುತ್ತದೆ. 

ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಬದುಕನ್ನು ರೂಪಿಸಿಕೊಂಡರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯವೆಂದು ಅಭಿಪ್ರಾಯಪಟ್ಟರು. ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ಮಾಡಿದರು. ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಶಬ್ಬೀರಭಾಷಾ ಆಲೂರ ಸ್ವಾಗತಿಸಿ ಕಾರ್ಯಕ್ರಮ ಆರಂಭಿಸಿದರು. ಕನ್ನಡ ಪ್ರಾಧ್ಯಾಪಕ ಭೀಮೇಶ ಕಾರ್ಯಕ್ರಮ ನಡೆಸಿಕೊಟ್ಟರು. ಇತಿಹಾಸ ಪ್ರಾಧ್ಯಾಪಕಿ ರೋಹಿಣಿ ರಾಚಣ್ಣನವರ ವಂದನಾರೆ​‍್ಣಗೈದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.