ಬಾಣಂತಿಯ ಸಾವು - ತನಿಖೆಗೆ ಎಐಎಮ್‌ಎಸ್‌ಎಸ್, ಎಐಕೆಕೆಎಂಎಸ್ ಆಗ್ರಹ
ಬಳ್ಳಾರಿ 01: ಇಂದು ಕೋಳೂರು ಗ್ರಾಮದ ಬಾಣಂತಿ ಮಹಾದೇವಿ ಅವರ ಹೆರಿಗೆಯ ನಂತರ ಸಾವಾಗಿರುವುದು ತೀವ್ರ ಆಘಾತಕರ. ಸಾವೀಗೀಡಾದ ಬಾಣಂತಿ ಮಹಾದೇವಿ ಅವರಿಗೆ ಕೇವಲ 21 ವರ್ಷ ವಯಸ್ಸಾಗಿದ್ದು ಸಿಸೇರಿಯನ್ ಶಸ್ತ್ರಚಿಕಿತ್ಸೆ ನಂತರ ಸೋಮ್ಕಿನಿಂದ ಮೃತರಾಗಿದ್ದಾರೆಂದು ವರದಿಯಾಗಿದೆ. ಈ ಮೂಲಕ ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿರುವುದು ಅತ್ಯಂತ ಆತಂಕದ ವಿಷಯ. ಇಂತಹ ಮನಕಲಕುವ ಘಟನೆಯ ಬಗ್ಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಎಐಕೆಕೆಎಂಎಸ್ ರೈತ ಸಂಘಟನೆಗಳು ತೀವ್ರ ಆಘಾತ ಮತ್ತು ನೋವನ್ನು ವ್ಯಕ್ತಪಡಿಸುತ್ತದೆ.
ಈ ಸಂದರ್ಭದಲ್ಲಿ ಎಐಎಮ್‌ಎಸ್‌ಎಸ್‌ನ ಜಿಲ್ಲಾ ಅಧ್ಯಕ್ಷರಾದ ಈಶ್ವರಿ ಕೆ.ಎಂ. ಮಾತನಾಡಿ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅರಸಿಕೊಂಡು ಬರುವ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಸರಿಯಾದ ಆರೋಗ್ಯ ಸೌಲಭ್ಯಗಳು ಸಿಗದೇ ಈ ರೀತಿ ಅನಾಯಾಸವಾಗಿ ಜೀವ ತೇಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿಗೂ ಕೂಡ ಅವಶ್ಯಕತೆಗನುಗುಣವಾಗಿ ನುರಿತ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಕೊರತೆಯಿದೆ, ಜೊತೆಗೆ ಆಧುನಿಕ ಯಂತ್ರಗಳು, ಮೂಲಭೂತ ಸೌಲಭ್ಯಗಳಿಲ್ಲ. ಇದರಿಂದಾಗಿ ಬಡ ಮಹಿಳೆಯರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳೇ ಸಾವಿನ ಕೂಪಗಳಾಗುತ್ತವೆ. ಪ್ರಸವಪೂರ್ವ ಮತ್ತು ಪ್ರಸವ ನಂತರದ ತಾಯಂದಿರ ಸಾವುಗಳಲ್ಲಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳೆ ಮೊದಲನೇ ಸ್ಥಾನದಲ್ಲಿವೆ. ಪರಿಸ್ಥಿತಿ ಹೀಗಿದ್ದರೂ ಕೂಡ ಸರ್ಕಾರಗಳು ಮಾತ್ರ ಆರೋಗ್ಯ ಬಜೆಟ್ಟನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಲೆ ಖಾಸಗಿಕರಣಕ್ಕೆ ದಾರಿ ಮಾಡಿಕೊಡುತ್ತಿವೆ. ಇರುವ ಅಲ್ಪ ಸ್ವಲ್ಪ ಸರ್ಕಾರಿ ಯೋಜನೆಗಳು ಕೂಡ ಬಡ ಮಹಿಳೆಯರ ಪಾಲಿಗೆ ಗಗನ ಕುಸುಮಗಳಾಗಿವೆ. ಇಂತಹ ಹೀನ ಪರಿಸ್ಥಿತಿಗೆ ಬಡ ಜೀವಗಳೇ ಬಲಿಪಶುಗಳು!! ಬಡ ಜನರ ಆರೋಗ್ಯದ ಬಗ್ಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಅತ್ಯಂತ ಖಂಡನೀಯ.
ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಬಾಣಂತಿಯರ ಸಾವಿನ ಸರಣಿ ಮುಂದುವರೆದಿರುವುದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮೃತರ ಕುಟುಂಬಕ್ಕೆ ಪರಿಹಾರವನ್ನು ಒದಗಿಸಬೇಕು ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಮತ್ತು ಆಲ್ ಇಂಡಿಯಾ ರೈತ ಕೃಷಿಕಾರ್ಮಿಕ ಸಂಘಟನೆಗಳ ಬಳ್ಳಾರಿ ಜಿಲ್ಲಾ ಸಮಿತಿಯು ಬಿಮ್ಸ್ ನಿರ್ದೇಶಕರಿಗೆ ಈ ಮೂಲಕ ಮನವಿ ಸಲ್ಲಿಸಲಾಯತು.
ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ಎಐಕೆಕೆಎಂಎಸ್‌ನ ಜಿಲ್ಲಾಧ್ಯಕ್ಷರು ಗೋವಿಂದ್, ಕಾರ್ಯದರ್ಶಿ ಗುರಳ್ಳಿ ರಾಜ, ಎಐಎಮ್‌ಎಸ್‌ಎಸ್‌ನ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮೀ, ಸದಸ್ಯರಾದ ವಿದ್ಯಾ, ಜೆ. ಸೌಮ್ಯ ಉಪಸ್ಥಿತರಿದ್ದರು.