ಸಾಲ ಅರ್ಜಿಗಳ ತ್ವರಿತ ವಿಲೇವಾರಿಗೆ ಬ್ಯಾಂಕುಗಳಿಗೆ ಸೂಚನೆ

ಸಾಲ ಅರ್ಜಿಗಳ ತ್ವರಿತ ವಿಲೇವಾರಿಗೆ ಬ್ಯಾಂಕುಗಳಿಗೆ ಸೂಚನೆ Banks instructed to expedite loan application processing

ಲೋಕದರ್ಶನ ವರದಿ 

 ವಿಜಯಪುರ 18: ವಿವಿಧ ಸರ್ಕಾರಿ ಯೋಜನೆಗಳಡಿ ಬ್ಯಾಂಕ್ಗಳಿಗೆ ಸಲ್ಲಿಕೆಯಾಗುವ ಸಾಲ ಅರ್ಜಿಗಳನ್ನು ಅನಗತ್ಯವಾಗಿ ಬಾಕಿ ಉಳಿಸದೆ, ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್ ಸೂಚಿಸಿದರು.  ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಅಗ್ರಣೀಯ (ಲೀಡ್) ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ತ್ರೈಮಾಸಿಕ ಜಿಲ್ಲಾ ಸಲಹಾ ಸಮಿತಿ (ಡಿಸ್ಟ್ರಿಕ್ಟ್‌ ಕನ್ಸಲ್ಟೇಟಿವ್ ಕಮಿಟಿ) ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಬ್ಯಾಂಕ್ಗಳಿಗೆ ಬರುವ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಆರ್ಬಿಐ ಮಾರ್ಗಸೂಚಿಗಳಂತೆ ಬ್ಯಾಂಕಿಂಗ್ ಯೋಜನೆಗಳ ಕುರಿತು ಗ್ರಾಹಕರಿಗೆ ಸಮರ​‍್ಕ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.  ಸಾಲ ಸೌಲಭ್ಯಕ್ಕಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಬಾಕಿ ಇರಿಸದೆ ಪರೀಶೀಲಿಸಬೇಕು. ದಾಖಲೆಗಳ ಕೊರತೆ ಇದ್ದಲ್ಲಿ ಅರ್ಜಿದಾರರಿಗೆ ತಕ್ಷಣ ಮಾಹಿತಿ ನೀಡಿ ಪೂರ್ಣಗೊಳಿಸಬೇಕು. ಸರ್ಕಾರದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿ ಸಾಲ ಸೌಲಭ್ಯ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.  

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಡಾ. ಬಿ.ಆರ್‌. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ಸಮಾಜ ಕಲ್ಯಾಣ ಇಲಾಖೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಕೃಷಿ ಇಲಾಖೆಯ ವಿವಿಧ ಯೋಜನೆಗಳು, ಪ್ರಧಾನಮಂತ್ರಿ ಸೂರ್ಯ ಘರ್, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಹಾಗೂ ಅಟಲ್ ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಬಾಕಿ ಉಳಿದಿರುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವಂತೆ ಸೂಚಿಸಿದರು.  

ಒಂದು ವಾರದೊಳಗೆ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಪರೀಶೀಲಿಸಿ ವಿಲೇವಾರಿ ಮಾಡಬೇಕು. ಅನಗತ್ಯ ವಿಳಂಬ ಕಂಡುಬಂದಲ್ಲಿ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.  ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಅಶೋಕ ಕಲ್ಲಗಟ್ಟಿ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ (ಎಲ್ಡಿಎಂ) ಬಿ. ಸಿದ್ದಯ್ಯ, ಆರ್ಬಿಐ ವ್ಯವಸ್ಥಾಪಕಿ ಸಿಲ್ ಪ್ರಿಯಾ ಗೌತಮ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್ ಪ್ರತಿನಿಧಿಗಳು ಉಪಸ್ಥಿತರಿದ್ದರು.