ನವದೆಹಲಿ, ನ 2: ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್
ಸಿಇಪಿ) ವಾಣಿಜ್ಯ ಒಪ್ಪಂದ ಕುರಿತಂತೆ ಮಾತುಕತೆಗಾಗಿ ಪ್ರಧಾನಿ ನರೇಂದ್ರಮೋದಿ ಬ್ಯಾಂಕಾಕ್ ತಲುಪಿರುವಂತೆಯೇ,
ಈ ಒಪ್ಪಂದಕ್ಕೆ ಆತುರಾತುರವಾಗಿ ಸಹಿ ಹಾಕಬಾರದು ಇದರ ಕರಡು ಸಂಸತ್‍ನಲ್ಲಿ ಮಂಡಿಸಬೇಕು ಎಂದು ಎಡಪಕ್ಷಗಳು
ಒತ್ತಾಯಸಿವೆ.
‘ಆರ್‌ಸಿಇಪಿ ಒಪ್ಪಂದ ಭಾಗೀದಾರರನ್ನು ಒಳಗೊಂಡಿಲ್ಲ. ಈ
ಕುರಿತಂತೆ ರಾಜ್ಯಗಳನ್ನು ಮತ್ತು ಸಂಸತ್ ಅನ್ನು ಸಂಪರ್ಕಿಸದೆ ಮಾತುಕತೆಗಳನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರದ ರಹಸ್ಯ
ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ ಅತ್ಯಂತ ಆಕ್ಷೇಪಾರ್ಹವಾಗಿದೆ’ ಎಂದು ಸಿಪಿಎಂ ಪಾಲಿಟ್ ಬ್ಯೂರೋ
ಹೇಳಿಕೆಯಲ್ಲಿ ತಿಳಿಸಿದೆ.
ಆಸಿಯಾನ್, ಚೀನಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಜಪಾನ್,
ದಕ್ಷಿಣ ಕೊರಿಯಾ ಮತ್ತು ಭಾರತ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತಂತೆ ಮಾತುಕತೆ ನಡೆಯುತ್ತಿದ್ದು, ಆರ್‌ಸಿಇಪಿ ಒಪ್ಪಂದಕ್ಕೆ ಕೊನೆಯ
ನಿಮಿಷದ ಮಾತುಕತೆ ಪ್ರಗತಿಯಲ್ಲಿದೆ ಎಂದು ಸಿಪಿಎಂ ಗಮನಸೆಳೆದಿದೆ.
‘ಭಾರತ ಎಫ್‌ಟಿಎಗೆ ಸೇರಲು ಬಯಸಿದರೆ, ಅದು ಭಾರತದ ಉತ್ಪಾದನೆ
ಮತ್ತು ಕೃಷಿಗೆ ಹಾನಿ ಮಾಡುತ್ತದೆ. ಅಲ್ಲದೆ, ದೇಶದ ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸುತ್ತದೆ.
ಇದು ಉದ್ಯೋಗ ಮತ್ತು ಜನರ ಯೋಗಕ್ಷೇಮದ ಮೇಲೆ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.’ ಎಂದು
ಸಿಪಿಎಂ ಹೇಳಿದೆ.
ಹಿಂದಿನ ಸರ್ಕಾರಗಳ ನಿರ್ಧಾರಗಳಿಂದಾಗಿ ಭಾರತದ ವಾಣಿಜ್ಯ
ಕೊರತೆ ಸ್ಥಿರ ಏರಿಕೆ ಕಂಡಿದ್ದು, ಪ್ರಸ್ತುತ 184 ಶತಕೋಟಿ ಡಾಲರ್ ತಲುಪಿದೆ.
‘ಪ್ರಸ್ತುತ ಪ್ರಸ್ತಾಪಿಸಲಾದ ಎಫ್‍ಟಿಎ ಒಪ್ಪಂದ ವಾಣಿಜ್ಯ
ಕೊರತೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಭಾರತೀಯ ಉತ್ಪಾದನೆಯು ಈಗಾಗಲೇ ಮಂದಗತಿಯನ್ನು ಎದುರಿಸುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿನ ಸಂಕಷ್ಟ ಮುಂದುವರಿಯುತ್ತಿದೆ ಎಂದು ಪಕ್ಷ ಹೇಳಿದೆ. ಆರ್‌ಸಿಇಪಿ ಕುರಿತು
ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಸಿಪಿಐ ಸಹ ಪ್ರತ್ಯೇಕ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದೆ.
‘ಮಾತುಕತೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಆರ್‌ಎಸ್‌ಎಸ್ ನಿಯಂತ್ರಣದಲ್ಲಿರುವ ಬಿಜೆಪಿ ಸರ್ಕಾರ ದೇಶೀಯ ಭಾಗೀದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ರಾಜ್ಯ ಸರ್ಕಾರಗಳೊಂದಿಗೆ ಯಾವುದೇ ಸಮಾಲೋಚನೆ ಮಾಡಿಲ್ಲ. ಅಥವಾ ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಸಿಲ್ಲ.’ ಎಂದು ಸಿಪಿಐ ಹೇಳಿದೆ.
ಉದ್ದೇಶಿತ ಆರ್‌ಸಿಇಪಿ ವಿರುದ್ಧ ರೈತ ಸಂಘಟನೆಗಳು ನರ್
4 ರಂದು ಕರೆ ನೀಡಿರುವ ಅಖಿಲ ಭಾರತ ಪ್ರತಿಭಟನೆಗೆ ಎಡ ಪಕ್ಷಗಳು ಬೆಂಬಲ ನೀಡಿವೆ. ಆರ್‌ಸಿಇಪಿ ಒಪ್ಪಂದಕ್ಕೆ
ಸಹಿ ಹಾಕುವುದರ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ನಡೆಸಲು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್
ಕರೆ ನೀಡಿದೆ.