ಮದ್ದೂರ್, ಫೆ .7, ಮಂಡ್ಯ ಜಿಲ್ಲೆಯ ಮದ್ದೂರಿನ ಬೆಂಗಳೂರು-ಮೈಸೂರು ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಕೃಷಿ ಇಲಾಖೆ ಕಚೇರಿ ಬಳಿ ಗುರುವಾರ ರಾತ್ರಿ ಮಣ್ಣು ಕುಸಿದು ಇಬ್ಬರು ಕೂಲಿ ಕಾರ್ಮಿಕರು ಜೀವಂತವಾಗಿ ಮಣ್ಣನಡಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮೃತರನ್ನು ಜಾರ್ಖಂಡ್ ಮೂಲದ ಕಾಶಿನಾಥ್ (37), ಮತ್ತು ರಾಜಗಂಧ್ (30) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿ ಯೋಜನೆಯ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಪಿಲ್ಲರ್ ಗುಂಡಿ ತೆಗೆಯುವಾಗ ಈ ದುರಂತ ಸಂಭವಿಸಿದೆ. ಈ ಕಾಮಗಾರಿಯಲ್ಲಿ ಉತ್ತರ ಭಾರತದ ರಾಜ್ಯಗಳ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮೃತರು ಜಾರ್ಖಂಡ್ ಮೂಲದವರು ಎಂದು ತಿಳಿದುಬಂದಿದೆ. ಆದರೆ ಆ ರಾಜ್ಯದ ಯಾವ ಗ್ರಾಮದವರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಯೋಜನೆಯಲ್ಲಿ ಕಾರ್ಮಿಕರ ಪ್ರಾಣ ಕಳೆದುಕೊಂಡ ಮೊದಲ ದುರಂತ ಪ್ರಕರಣ ಇದಾಗಿದೆ. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.