ಬೆಂಗಳೂರು: ಜಿಲ್ಲಾಧಿಕಾರಿ ಕಚೇರಿಗೆ ದಾಳಿ; ಸಿ.ಟಿ.ರವಿ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು ೦೭: ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಸಾರ್ವಜನಿಕ ಆಸ್ತಿ ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹಾಗೂ ಅವರ 18 ಬೆಂಬಲಿಗರ ವಿರುದ್ಧ ಚಿಕ್ಕಮಗಳೂರು ಟೌನ್ ಠಾಣೆ ಪೊಲೀಸರು ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಸಿ.ಟಿ. ರವಿ ಸೇರಿದಂತೆ 18 ಜನ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಬಿ.ಎ. ಪಾಟೀಲ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ಮಾನ್ಯ ಮಾಡಿದೆ. ಪ್ರಕರಣವೇನು?: 2014ರ ಸೆಪ್ಟೆಂಬರ್ 27ರಂದು ಬೆಳಗ್ಗೆ 11.20ರ ಸಮಯದಲ್ಲಿ ಪೂರ್ವಾನುಮತಿ ಪಡೆಯದೇ ಅಕ್ರಮ ಕೂಟ ರಚಿಸಿಕೊಂಡು ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದರು. ಮರಳು ಪರವಾನಗಿ ನೀಡುವಂತೆ ಆಗ್ರಹಿಸಿ ಘೋಷಣೆ ಕೂಗಿದ್ದರು. ಕಚೇರಿಗೆ ನುಗ್ಗಿ ಗಾಜುಗಳನ್ನು ಒಡೆದು ಹಾಕಿ ಸರ್ಕಾರಿ ಆಸ್ತಿಗೆ ನಷ್ಟ ಉಂಟು ಮಾಡಿದ್ದರು. ಕರ್ತವ್ಯನಿರತ ಪಿಎಸ್‌ಐ ಕೆ.ಆರ್.ಸುನಿತಾ ಮೇಲೆ ಹಲ್ಲೆ ನಡೆಸಿದ್ದರು ಎಂದು ಸಿ.ಟಿ. ರವಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು.