ಕನಿಷ್ಠ ಐದು ವರ್ಷಗಳ ಕಾಲ ಹೊಸ ಆಟೋ ಪರ್ಮಿಟ್ ನಿಷೇಧಿಸಿ: ವಿಶ್ವನಾಥ ಗೌಡ

ಕನಿಷ್ಠ ಐದು ವರ್ಷಗಳ ಕಾಲ ಹೊಸ ಆಟೋ ಪರ್ಮಿಟ್ ನಿಷೇಧಿಸಿ: ವಿಶ್ವನಾಥ ಗೌಡ Ban new auto permits for at least five years: Vishwanath Gowda

ಕಾರವಾರ 15: ಉತ್ತರ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಅತಿಯಾಗಿ ಹೆಚ್ಚಾಗಿರುವ ಹಿನ್ನೆಲೆ, ಕನಿಷ್ಠ ಐದು ವರ್ಷಗಳ ಕಾಲ ಹೊಸ ಆಟೋ ನೀಡುವುದನ್ನು ಸ್ಥಗಿತಗೊಳಿಸಬೇಕು ಹಾಗೂ ಆಟೋ ಸಂಚರಿಸುವ ಪರ್ಮಿಟ್ ವ್ಯಾಪ್ತಿಯನ್ನು ನಗರ-ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 50 ಕಿಲೋ ಮೀಟರ್‌ವರೆಗೆ ವಿಸ್ತರಿಸಬೇಕು ಎಂದು ಜಿಲ್ಲೆಯ ಆಟೋ ರಿಕ್ಷಾ ಚಾಲಕರ-ಮಾಲಕರ ಸಂಘಟನೆಗಳು ಆಗ್ರಹಿಸಿವೆ.  

ಸೋಮವಾರ ಕಾರವಾರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಉತ್ತರಕನ್ನಡ ಜಿಲ್ಲಾ ಆಟೋ ಚಾಲಕ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶಿರಸಿಯ ವಿಶ್ವನಾಥ .ಎಸ್‌. ಗೌಡ ನಮ್ಮ ಬೇಡಿಕೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದೇವೆ. ಆರ್ ಇ ಒ ಇಲಾಖೆಯ ಗಮನಕ್ಕೆ ತಂದಿದ್ದೇವೆ ಎಂದರು. ಆಟೋ ಸಂಘಟನೆಗಳಾಗಿ ನಾವು ಹಲವು ವರ್ಷಗಳಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿಗಳನ್ನು ನೀಡಿದ್ದೇವೆ ಮತ್ತು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇವೆ. ಕೆಲವು ಬೇಡಿಕೆಗಳು ಈಡೇರಿದರೂ, ಅತಿ ಅವಶ್ಯಕವಾದ ಸಮಸ್ಯೆಗಳು ಇನ್ನೂ ಬಗೆಹರಿಯದೇ ಉಳಿದಿವೆ ಎಂದರು. ಜಾರಿಯಾದ ಬೇಡಿಕೆಗಳೂ ಎಲ್ಲ ಆಟೋ ವರ್ಗದವರಿಗೆ ಸಮರ​‍್ಕವಾಗಿ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಉತ್ತರ ಕನ್ನಡ ಜಿಲ್ಲೆಯಲ್ಲಿ 7 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳಿದ್ದು, ರಾಜ್ಯಾದ್ಯಂತ ಅಂದಾಜು 8ಲಕ್ಷಕ್ಕೂ ಅಧಿಕ ಆಟೋಗಳು ಸಂಚರಿಸುತ್ತಿವೆ. ರಿಕ್ಷಾ ಖರೀದಿ, ರಸ್ತೆ ತೆರಿಗೆ, ಪರ್ಮಿಟ್, ವಿಮೆ, ನವೀಕರಣ, ಎಲ್ ಪಿಜಿ- ಸಿಎನ್‌ಜಿ- ಪೆಟ್ರೋಲ್ ಬಿಡಿ ಭಾಗಗಳ ತೆರಿಗೆಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರತಿವರ್ಷ 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹಿಸುತ್ತಿವೆ ಎಂದರು. ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಆಟೋಗಳ ಸಂಖ್ಯೆಯನ್ನು ಮೀರಿ ಹಲವು ತಾಲೂಕುಗಳಲ್ಲಿ ರಿಕ್ಷಾಗಳು ಹೆಚ್ಚಾಗಿರುವುದರಿಂದ, ಆಟೋ ನಿಲ್ದಾಣಗಳಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತಿದೆ. ಜೊತೆಗೆ ಚಾಲಕರ-ಮಾಲಕರ ಸಾಕಷ್ಟು ದುಡಿಮೆ ಇಲ್ಲದೆ ಜೀವನ ಸಂಕಷ್ಟದಲ್ಲಿದೆ. ಕೆಲವರು ಲಾಭದಾಸೆಯಿಂದ ಆಟೋ ಖರೀದಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಅವರು ವಿವರಿಸಿದರು. ಈ ಹಿನ್ನೆಲೆಯಲ್ಲಿ ಎರಡು ಪರ್ಮಿಟ್‌ಗಿಂತ ಹೆಚ್ಚು ಹೊಂದಿರುವ ಮಾಲಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಪರ್ಮಿಟ್ ತಾತ್ಕಾಲಿಕ ನಿಷೇಧ ಜಾರಿಯಲ್ಲಿರುವಂತೆ, ಉತ್ತರ ಕನ್ನಡದಲ್ಲೂ ಕನಿಷ್ಠ ಐದು ವರ್ಷಗಳ ಕಾಲ ಹೊಸ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಬೇಕು. ಪರ್ಮಿಟ್ ನೀಡುವಾಗ ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ನ ಪರವಾನಿಗೆಯನ್ನು ಕಡ್ಡಾಯಗೊಳಿಸಬೇಕು. ಹಳೆಯ ಜಿಲ್ಲಾ ಕೇಂದ್ರಗಳಲ್ಲಿಯೇ ಪರ್ಮಿಟ್ ನೀಡುವ ಪದ್ಧತಿಯನ್ನು ಪುನರುಜ್ಜೀವನಗೊಳಿಸಬೇಕು ಎಂದರು. ಬೇರೆ ಜಿಲ್ಲೆಗಳಲ್ಲಿ ಜಾರಿಯಲ್ಲಿರುವಂತೆ ಉತ್ತರ ಕನ್ನಡದಲ್ಲೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 50 ಕಿ.ಮೀ ವರೆಗೆ ಪರ್ಮಿಟ್ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ ಬೇರೆ ಜಿಲ್ಲೆಗಳ ನೊಂದಣಿ ಹೊಂದಿರುವ ಆಟೋ ರಿಕ್ಷಾಗಳಿಗೆ ಪರ್ಮಿಟ್ ಹಾಗೂ ಸಂಚಾರ ಪರವಾನಿಗೆ ನೀಡಬಾರದು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.  

ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ತಂದು, ಇತರ ಜಿಲ್ಲೆಗಳಂತೆ ಕಾನೂನಾತ್ಮಕ ಬದಲಾವಣೆಗಳನ್ನು ಮಾಡಿ, 30 ದಿನಗಳೊಳಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಂತೆ ವಿನಂತಿಸಿದ್ದಾರೆ.