ಸತತ ಮಳೆಗೆ ಬಳ್ಳಾರಿ ನಾಲಾ ಉಕ್ಕಿ ಹರಿವು: ರೈತರಲ್ಲಿ ಆತಂಕ

ಸತತ ಮಳೆಗೆ ಬಳ್ಳಾರಿ ನಾಲಾ ಉಕ್ಕಿ ಹರಿವು: ರೈತರಲ್ಲಿ ಆತಂಕ  Ballari Nala overflows due to continuous rain; farmers worried

ಬೆಳಗಾವಿ 09: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಳಗಾವಿಯ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದ್ದು, ಹಳ್ಳದ ದಡದಲ್ಲಿರುವ ವಡಗಾವಿ ಹಾಗೂ ಸುತ್ತಮುತ್ತಲಿನ ರೈತರು ಆತಂಕಕ್ಕೊಳಗಾಗಿದ್ದಾರೆ. ಹಳ್ಳದಲ್ಲಿ ಜಮೆಯಾಗಿರುವ ಹೂಳು, ಜಲಪರ್ಣಿ ಮತ್ತು ತ್ಯಾಜ್ಯ ನೀರಿನಿಂದ ನೀರು ಸರಾಗವಾಗಿ ಹರಿಯದೆ ಕೃಷಿ ಜಮೀನುಗಳಿಗೆ ನುಗ್ಗುತ್ತಿದ್ದು, ಬೆಳೆ ನಾಶವಾಗುವ ಭೀತಿ ಎದುರಾಗಿದೆ.  

ಪ್ರತಿ ವರ್ಷ ಮಳೆಗಾಲದಲ್ಲಿ ಬಳ್ಳಾರಿ ನಾಲಾದಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯ. ಆದರೆ ಈ ಬಾರಿ ಹಳ್ಳದಲ್ಲಿ ಬೆಳೆದಿರುವ ಜಲಪರ್ಣಿ, ಸಂಗ್ರಹವಾಗಿರುವ ಹೂಳು ಹಾಗೂ ತ್ಯಾಜ್ಯದಿಂದ ನೀರಿನ ಹರಿವಿಗೆ ಅಡ್ಡಿಯಾಗಿದ್ದು, ಕಲುಷಿತ ನೀರು ರೈತರ ಫಲವತ್ತಾದ ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದ ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮಿನ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.  

ಸ್ಥಳೀಯ ರೈತರ ತೀವ್ರ ವಿರೋಧದ ನಡುವೆಯೂ ನಡೆಯುತ್ತಿರುವ ಬೈಪಾಸ್ ಕಾಮಗಾರಿ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ರೈತರು ಆರೋಪಿಸಿದ್ದಾರೆ. ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿರುವುದರಿಂದ ಧಾಮಣೆ, ಸುಳ್ಯ, ಮಚ್ಛೆ ಹಾಗೂ ಮಜಗಾಂವ್ ಭಾಗಗಳಿಂದ ಹರಿದುಬರುವ ನೀರು ಕೃಷಿ ಜಮೀನುಗಳಲ್ಲೇ ನಿಂತು, ಬೆಳೆಗಳು ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.  

ಈ ಕಾಮಗಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೂರು ಪ್ರಕರಣಗಳು ಬಾಕಿ ಇದ್ದರೂ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಮುಂದುವರಿಸಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನ್ಯಾಯಾಲಯವು ರೈತರ ಪರವಾಗಿ ತೀಪು ನೀಡಿದ್ದರೂ ಕಾಮಗಾರಿ ತಡೆಯಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಜುಲೈ 3ರಂದು ನಡೆಯಬೇಕಿದ್ದ ವಿಚಾರಣೆ ಜುಲೈ 20ಕ್ಕೆ ಮುಂದೂಡಲ್ಪಟ್ಟಿರುವುದರಿಂದ ರೈತರ ಆತಂಕ ಮತ್ತಷ್ಟು ಹೆಚ್ಚಿದೆ.  

ಶಹಾಪುರ, ವಡಗಾವಿ, ಅನಗೋಳ, ಮಾಧವಪುರ, ಹಳೆ ಬೆಳಗಾವಿ, ಬೆಳಗಾವಿ ಹಾಗೂ ಹಲಗಾ ಭಾಗಗಳ ರೈತರು ಈ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಮೀನುಗಳಲ್ಲಿ ನೀರು ದೀರ್ಘಕಾಲ ನಿಂತಿರುವುದರಿಂದ ಮಣ್ಣಿನ ಫಲವತ್ತತೆಯೂ ಕುಂಠಿತವಾಗುತ್ತಿದೆ. ಕೂಡಲೇ ಬಳ್ಳಾರಿ ನಾಲಾದ ಹೂಳು ಹಾಗೂ ಜಲಪರ್ಣಿಯನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.