ಬಳ್ಳಾರಿ: ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

ಬಳ್ಳಾರಿ: ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ Ballari: Gender minorities participate in survey

ಬಳ್ಳಾರಿ 20: ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊಂಡಿರುವ ಲಿಂಗತ್ವ ಅಲ್ಪಸಂಖ್ಯಾತರ ಮೂಲಹಂತದ ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಫಲಾನುಭವಿಗಳು ತಪ್ಪದೇ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಅವರು ತಿಳಿಸಿದ್ದಾರೆ. 

ಸಮೀಕ್ಷೆಯು ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಲಿಂಗತ್ವ ಅಲ್ಪಸಂಖ್ಯಾತರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಹೆಸರು ಹಾಗೂ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು.ರಾಜ್ಯ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ಮೊದಲ ಬಾರಿಗೆ ರಾಜ್ಯಾದಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲಹಂತದ ಸಮೀಕ್ಷೆ ನಡೆಸಲಾಗುತ್ತಿದೆ. 

ಸಮೀಕ್ಷೆ ಕುರಿತಂತೆ ಯಾವುದೇ ಸಹಾಯ, ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 18005992025 ಗೆ ಕರೆಮಾಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ: ಮೂರು ನಮೂನೆಯ ಮಾಹಿತಿ ಸಂಗ್ರಹಬಳ್ಳಾರಿ 20: ಜಿಲ್ಲೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಕೈಗೊಳ್ಳಲಾಗಿದ್ದು, ಸಮೀಕ್ಷೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶದನ್ವಯ ಮೂರು ವಿವಿಧ ರೀತಿಯ ಅರ್ಜಿ ನಮೂನೆಗಳಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಯ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. 

ನಮೂನೆ-1: ಈಗಾಗಲೇ ಸರ್ಕಾರದಿಂದ 1993-94 ಮತ್ತು 2007-08ನೇ ಸಾಲಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಹೆಸರು ನೋಂದಣಿಯಾಗಿದ್ದು, ಮರಣ ಹೊಂದಿರುವ ಮಹಿಳೆಯ ಕುಟುಂಬದ ಅಧೀಕೃತ ಸದಸ್ಯರು ಮಾಹಿತಿ ಭರ್ತಿ ಮಾಡಿ ಕೊಡಬೇಕಾದ ಅರ್ಜಿ ನಮೂನೆ-1 ರಲ್ಲಿ ಸಲ್ಲಿಸಬೇಕು. 

ನಮೂನೆ-2: ಈ ಹಿಂದೆ 1993-94 ಮತ್ತು 2007-08ನೇ ಸಾಲಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಹೆಸರು ನೋಂದಣಿಯಾಗದೇ ಹೊರಗುಳಿದ, ಹಾಲಿ ಜೀವಂತವಿರುವ ಹೊಸದಾಗಿ ದೇವದಾಸಿ ಪಟ್ಟಿಗೆ ಸೇರೆ​‍್ಡಗೊಳ್ಳ ಬಯಸುವ ಮಾಜಿ ದೇವದಾಸಿ ಮಹಿಳೆಯರು ಮಾಹಿತಿ ಭರ್ತಿ ಮಾಡಿ ಕೊಡಬೇಕಾದ ಅರ್ಜಿ ನಮೂನೆ-2ರಲ್ಲಿ ಸಲ್ಲಿಸಬೇಕು. 

ನಮೂನೆ-3: ಈ ಹಿಂದೆ 1993-94 ಮತ್ತು 2007-08ನೇ ಸಾಲಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಹೆಸರು ನೊಂದಣಿಯಾಗದೇ ಹೊರಗುಳಿದ ಮತ್ತು ಪ್ರಸ್ತುತ ಮರಣ ಹೊಂದಿರುವ ಮಹಿಳೆಯರ ಕುಟುಂಬದ ಅಧೀಕೃತ ಸದಸ್ಯರು ಮಾಹಿತಿ ಭರ್ತಿ ಮಾಡಿ ಕೊಡಬೇಕಾದ ಅರ್ಜಿ ನಮೂನೆ-3 ರಲ್ಲಿ ಸಲ್ಲಿಸಬೇಕು. 

ಈ ಮೇಲ್ಕಂಡ ಅರ್ಜಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳಾದ ಮಹಿಳೆಯ ಆಧಾರ್ ಕಾರ್ಡ್‌ (ಮೊಬೈಲ್ ನಂಬರ್ ಲಿಂಕ್ ಇರುವ ಆಧಾರ್ ಕಾರ್ಡ್‌ ಸಂಖ್ಯೆ), ಮಹಿಳೆಯ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಕುಟುಂಬದ ಅಧೀಕೃತ ಸದಸ್ಯರ ಆಧಾರ್ ಕಾರ್ಡ್‌, ಹೊಸ ಸೇರೆ​‍್ಡ ಬಯಸುವ ಮಹಿಳೆಯರ ವಯಸ್ಸಿನ ದೃಢೀಕರಣ, ವೈದ್ಯಕೀಯ ದೃಢೀಕರಣ ಪತ್ರ, ಶಾಲಾ ದಾಖಲಾತಿ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ, ಜಾತಿ ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರಗಳೊಂದಿಗೆ ಅರ್ಜಿಗಳನ್ನು ಸಂಬಂಧಿಸಿದ ಆಯಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಿಗೆ ಅಕ್ಟೋಬರ್ 04 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬಿಎಂಸಿಆರ್‌ಸಿ: ‘ಫಾರ್ಮಕೋವಿಜಿಲನ್ಸ್‌’ ವಾರಾಚರಣೆ ಅಂಗವಾಗಿ ಜಾಥಬಳ್ಳಾರಿ 20: ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಓಷಧಶಾಸ್ತ್ರ ವಿಭಾಗದಿಂದ ‘ಫಾರ್ಮಕೋವಿಜಿಲನ್ಸ್‌’ ವಾರಾಚರಣೆ ಅಂಗವಾಗಿ ಶನಿವಾರ ಬಿಎಂಸಿಆರ್‌ಸಿ ಆವರಣದಲ್ಲಿ ಜಾಥ ನಡೆಯಿತು. 

ಜಾಥಾಗೆ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿದೇರ್ಶಕ ಡಾ.ಗಂಗಾಧರ ಗೌಡ ಅವರು ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಓಷದೋಪಚಾರದಿಂದ ಉಂಟಾಗುವ ಅಡ್ಡಪರಿಣಾಮಗಳ ಕುರಿತು ಸಹ ಸಾರ್ವಜನಿಕರು ಸೂಕ್ತ ಮಾರ್ಗದರ್ಶನ ಹೊಂದಬೇಕು ಎಂದು ಹೇಳಿದರು.ಓಷಧಗಳು ದೇಹದೊಂದಿಗೆ ಹೇಗೆ ಸಂವಹನ ನಡೆಸುತ್ತವೆ, ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳ ಯಾವ ರೀತಿಯ ಪರಿಣಾಮ ಬೀರುತ್ತವೆ ಎನ್ನುವುದರ ಕುರಿತು ಸಂಶೋಧನಾರ್ಥಿಗಳು ಅಧ್ಯಯನ ಮಾಡಬೇಕು. ಓಷಧಶಾಸ್ತ್ರದ ಶಾಖೆಯಾದ ಫಾರ್ಮಕೊಡೈನಾಮಿಕ್ಸ್‌ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು, ಓಷಧದ ಕ್ರಿಯೆಯನ್ನು ನಿಯಂತ್ರಿಸುವ ಮೂಲಭೂತ ತತ್ವಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ತಿಳಿಸಿದರು.ಇದೇ ವೇಳೆ ಓಷಧಶಾಸ್ತ್ರ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ವೈದ್ಯಕೀಯ, ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿದ್ಯಾರ್ಥಿಗಳು ಜನರಲ್ಲಿ ಅರಿವು ಮೂಡಿಸುವಮತ್ತು ಅದರ ನೋಂದಣಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಬಿಎಂಸಿಆರ್‌ಸಿಯ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ಚಿದಂಬರ ಮೂರ್ತಿ, ಓಷಧಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವೈ.ವಿಶ್ವನಾಥ್, ಡಾ.ಮುರುಗೇಶ್ ಜೆ.ವಿ., ಡಾ.ವಿಶ್ವನಾಥ್‌.ಎಂ., ಡಾ.ಶಕುಂತಲಾ.ಬಿ., ಡಾ.ಜ್ಯೋತಿ ಡಿ.ಬಿ., ಡಾ.ಬಾಣಾಪೂರ್ ಅಂಬಿಕ, ಡಾ.ರಾಕೇಶ್ ಕುಮಾರ್‌.ಪಿ.ಕೆ ಸೇರಿದಂತೆ ವಿಭಾಗದ ಸ್ನಾತಕೋತ್ತರವಿದ್ಯಾರ್ಥಿಗಳಾದ ಡಾ.ಅನಿಸುರ್ ರೆಹಮಾನ್‌.ಎಂ., ಡಾ.ಅಜಯ್ ಕುಮಾರ್ ರಾಥೋಡ್, ಡಾ.ದೀಪಕ್‌.ಎಸ್‌., ಡಾ.ಚೇತನ್ ಕುಲಕರ್ಣಿ, ಡಾ.ಲಿಲ್ಲಿ ನಿತ್ಯಾ ಪ್ರಿಯದರ್ಶಿನಿ ಹಾಗೂ ಇತರರು ಭಾಗವಹಿಸಿದ್ದರು.