ಬಳ್ಳಾರಿ: ಅಕ್ರಮ ಬೀಜ ಮತ್ತು ರಸಗೊಬ್ಬರ ಮಾರಾಟದ ವಿರುದ್ಧ ಕೃಷಿ ಇಲಾಖೆ ದಾಳಿ ಹಲವು ಮಾದರಿಗಳ ವಶಕ್ಕೆ

ಬಳ್ಳಾರಿ: ಅಕ್ರಮ ಬೀಜ ಮತ್ತು ರಸಗೊಬ್ಬರ ಮಾರಾಟದ ವಿರುದ್ಧ ಕೃಷಿ ಇಲಾಖೆ ದಾಳಿ ಹಲವು ಮಾದರಿಗಳ ವಶಕ್ಕೆ Ballari: Agriculture Department raids against the sale of illegal seeds and fertilizers; several sam

 ಬಳ್ಳಾರಿ 06:  ರಾಜ್ಯದ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿನ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೇತೃತ್ವದ ವಿಶೇಷ ತಂಡಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಬೀಜ ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ವಶಪಡಿಸಿಕೊಂಡಿವೆ.  ಕೃಷಿ ಇಲಾಖೆ ಆಯುಕ್ತ ಡಾ. ಬಿ.ಸಿ. ಸತೀಶ್ ಅವರ ಸೂಚನೆಯಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೃಷಿ ಅಧಿಕಾರಿಗಳು ಕಠಿಣ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ.  

ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಹೊಳೆನರಸೀಪುರ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ 1966ರ ಬೀಜ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 85 ಸಾವಿರ ರೂ. ಮೌಲ್ಯದ 180 ಕೆಜಿ ಹೈಬ್ರಿಡ್ ಮೆಕ್ಕೆಜೋಳ ಬೀಜವನ್ನು ವಶಪಡಿಸಿಕೊಳ್ಳಲಾಗಿದೆ. ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೊಬಳಿ ಪುಷ್ಪಗಿರಿ ಅಗ್ರೋ ಕೇಂದ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 12 ಸಾವಿರ ರೂ. ಮೌಲ್ಯದ 30 ಕೆಜಿ ಹೈಬ್ರಿಡ್ ಮೆಕ್ಕೆಜೋಳ ಹಾಗೂ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೊಬಳಿ ಮದಿಹಳ್ಳಿ ಶ್ರೀ ವೆಂಕಟೇಶ್ವರ ಟ್ರೇಡರ್ಸ್ನಲ್ಲಿ ಕಾನೂನು ಉಲ್ಲಂಘಿಸಿ ಸಂಗ್ರಹಿಸಿದ್ದ ಸುಮಾರು 1.77 ಲಕ್ಷ ರೂ. ಮೌಲ್ಯದ 88 ಚೀಲ ಯೂರಿಯಾ ಹಾಗೂ ಪಾಸ್ಫೋ ಜಿಪ್ಸಂ ಗ್ರಾನುಲ್ಸ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.  

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಗೆಶಿ ಹೊಬಳಿ ಹಸಿರು ಹೈಟೆಕ್ ಸೀಡ್ಸ್‌ ಕೇಂದ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 86 ಸಾವಿರ ರೂ. ಮೌಲ್ಯದ 22 ಲೀಟರ್ ಸೂಕ್ಷ್ಮ ಪೋಷಕಾಂಶ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ.  ಮಂಡ್ಯ ತಾಲ್ಲೂಕಿನ ಈಚನ್ವಾಳದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 300 ಚೀಲ ಓ.ಕ.ಏ. ಯೂರಿಯಾ ಮಿಶ್ರಣವನ್ನು ಮಂಡ್ಯ ಕೃಷಿ ಅಧಿಕಾರಿಗಳು ಜುಲೈ 4ರಂದು ರಾತ್ರಿ ವಶಪಡಿಸಿಕೊಂಡಿದ್ದಾರೆ.  ಬೀಜ ಹಾಗೂ ರಸಗೊಬ್ಬರ ಮಾರಾಟಗಾರರು ನಿಯಮಬಾಹಿರವಾಗಿ ಚಟುವಟಿಕೆ ನಡೆಸುತ್ತಿರುವುದು ಕಂಡುಬಂದಲ್ಲಿ ಕೃಷಿ ಇಲಾಖೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.