ಮುದ್ದೇಬಿಹಾಳದಲ್ಲಿ ಬಕ್ರೀದ್ ಹಬ್ಬ ಶ್ರದ್ಧಾಭಕ್ತಿಯಿಂದ ಆಚರಣೆ
Bakrid festival celebrated with devotion in Muddebihal
ಮುದ್ದೇಬಿಹಾಳ 28: : ಪಟ್ಟಣದ ತಾಳಿಕೋಟೆ ರಸ್ತೆಯ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ತ್ಯಾಗ, ಬಲಿದಾನ ಮತ್ತು ಭಕ್ತಿ ಸಂಕೇತವಾದ ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.ಪಟ್ಟಣದ ಸಂದಲ್ ಮಸೀದಿ, ಬಾಗಬಾನ್ ಮಸೀದಿ, ಮದೀನಾ ಮಸೀದಿ, ಮಕ್ಕಾ ಮಸೀದಿ, ಮೀನಾ ಮಸೀದಿ, ಅಬೂಬಕರ್ ಮಸೀದಿ, ಅಫಾತ್ ಮಸೀದಿ, ಉಮರ್ ಫಾರೂಖ್ ಮಸೀದಿ, ಮುಸ್ತಫಾ ಮಸೀದಿ, ಆಕ್ಸಾ ಮಸೀದಿ, ತಯ್ಯಬಾ ಮಸೀದಿ ಹಾಗೂ ಬಿಲಾಲ್ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಜಾಮಿಯಾ ಮಸೀದಿ ಸಮೀಪದಿಂದ ಭಕ್ತರು ತಕ್ಬೀರ್ ಘೋಷಣೆಗಳೊಂದಿಗೆ ಈದ್ಗಾ ಮೈದಾನಕ್ಕೆ ಆಗಮಿಸಿದರು.
ಈದ್ಗಾ ಮೈದಾನದಲ್ಲಿ ಹಿರಿಯ ನಾಗರಿಕರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಮೌಲಾನಾ ಆಫ್ತಾಬ್ ಧರ್ಮೋಪದೇಶ ನೀಡಿ, ಕುರಬಾನಿ ಎಂದರೆ ಕೇವಲ ಪ್ರಾಣಿಯನ್ನು ಬಲಿ ಕೊಡುವುದಲ್ಲ; ತಮ್ಮ ಅಹಂಕಾರ, ಕೋಪ, ದ್ವೇಷ, ಸ್ವಾರ್ಥ ಹಾಗೂ ಕೆಟ್ಟ ಅಭ್ಯಾಸಗಳನ್ನು ಅಲ್ಲಾಹನ ಮಾರ್ಗದಲ್ಲಿ ತ್ಯಾಗ ಮಾಡುವುದೇ ನಿಜವಾದ ಕುರಬಾನಿ ಎಂದು ಹೇಳಿದರು. ಹಜ್ರತ್ ಇಬ್ರಾಹಿಂ (ಅ) ಹಾಗೂ ಇಸ್ಮಾಯಿಲ್ (ಅ) ಅವರ ತ್ಯಾಗದ ಘಟನೆಯನ್ನು ಉಲ್ಲೇಖಿಸಿದ ಅವರು, ಅಲ್ಲಾಹನ ಆದೇಶಕ್ಕಾಗಿ ಅತ್ಯಂತ ಪ್ರಿಯವಾದದ್ದನ್ನೂ ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂಬ ಸಂದೇಶ ನೀಡಿದರು.
ನಾವು ವರ್ಷಗಳಿಂದ ಕುರಬಾನಿ ಮಾಡುತ್ತಿದ್ದೇವೆ. ಆದರೆ ನಮ್ಮ ಜೀವನ, ನಡತೆ, ಮಾತು ಹಾಗೂ ಸ್ವಭಾವದಲ್ಲಿ ಬದಲಾವಣೆ ಆಗಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಆತ್ಮಪರೀಶೀಲನೆ ಮಾಡಬೇಕು. ಕುರಬಾನಿಯ ನಿಜವಾದ ಅರ್ಥ ನಮ್ಮೊಳಗಿನ ಕೆಟ್ಟ ಗುಣಗಳನ್ನು ತ್ಯಜಿಸುವುದಾಗಿದೆ ಎಂದು ಹೇಳಿದರು.ಇದೇ ವೇಳೆ ಸಮಾಜದಲ್ಲಿ ಪರಸ್ಪರ ಕ್ಷಮೆ, ಪ್ರೀತಿ ಮತ್ತು ಸಹೋದರತ್ವವನ್ನು ಬೆಳೆಸುವಂತೆ ಕರೆ ನೀಡಿದ ಅವರು, ಯಾರಾದರೂ ನಮ್ಮನ್ನು ನೋಯಿಸಿದ್ದರೆ ಅವರನ್ನು ಅಲ್ಲಾಹನಿಗಾಗಿ ಕ್ಷಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅದುವೇ ದೊಡ್ಡ ಕುರಬಾನಿ ಎಂದು ತಿಳಿಸಿದರು.ಸಭೆಯಲ್ಲಿ ಸ್ವಚ್ಛತೆಯ ಮಹತ್ವದ ಕುರಿತು ವಿಶೇಷವಾಗಿ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಪವಿತ್ರತೆ ಮತ್ತು ಸ್ವಚ್ಛತೆಗೆ ಅತ್ಯಂತ ಮಹತ್ವ ಇದೆ.
ಕುರಬಾನಿ ನಂತರ ಪರಿಸರ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.ಸಾಮಾಜಿಕ ಜಾಲತಾಣಗಳ ದುರುಪಯೋಗ ಬೇಡವೆಂದು ಎಚ್ಚರಿಕೆ ನೀಡಿದ ಅವರು, ಕುರಬಾನಿಯ ಫೋಟೋ ಹಾಗೂ ವಿಡಿಯೋಗಳನ್ನು ಅನಗತ್ಯವಾಗಿ ಹಂಚಿಕೊಳ್ಳದೆ, ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು ಎಂದು ಮನವಿ ಮಾಡಿದರು.ಕೊನೆಯಲ್ಲಿ, ಯುವಕರು ಇಸ್ಲಾಂನ ತ್ಯಾಗ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಎ.ಎಂ. ಮುಲ್ಲಾ, ಡಿ.ಡಿ. ಬಾಗವಾನ್, ಅಲೀಮ್ ಮೊಮೀನ್, ಅಬ್ದುಲ್ ಗನಿ ನದಾಫ್, ಉಸ್ಮಾನ್ ಗನಿ ಮುಲ್ಲಾ, ಅಬ್ದುಲ್ ಗಫೂರ್ ಮಕಾನದಾರ್, ಸದ್ದಾಂ ಕುಂಟೋಜಿ, ಎನ್.ಬಿ. ಮುದ್ನಾಳ, ವಹಾಬ್ ಮೊಮೀನ್, ಅಬ್ದುಲ್ ಖಾದಿರ್ ಮತೇದಾರ್, ಅಲ್ಲಾಭಕ್ಷ ನಾಯ್ಕೋಡಿ, ಹಾಜಿ ತೆಗ್ಗಿ, ಅಬ್ದುಲ್ ಮಜೀದ್ ಮಕಂದಾರ್, ಮೈಬೂಬ್ ಹಳ್ಳಿ, ಗುಲಾಂ ದಫೇದಾರ್, ಅಮೀನಸಾಬ್ ಮುಲ್ಲಾ, ಎಂ.ಎ. ಮುದ್ದೇಬಿಹಾಳ, ಮಹಿಬೂಬ್ ಗೊಲಸಂಗಿ, ಪಿಂಟು ಸಾಲಿಮನಿ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 