ಮಹಾಲಿಂಗಪುರದಲ್ಲಿ ಬಲಿದಾನ ಸಂಕೇತ ಬಕ್ರಿದ್ ಹಬ್ಬ ಆಚರಣೆ

ಮಹಾಲಿಂಗಪುರದಲ್ಲಿ ಬಲಿದಾನ ಸಂಕೇತ ಬಕ್ರಿದ್ ಹಬ್ಬ ಆಚರಣೆ  Bakrid festival, a symbol of sacrifice, celebrated in Mahalingapur

ಲೋಕದರ್ಶನ ವರದಿ 

ಮಹಾಲಿಂಗಪುರ 28: ಸ್ಥಳೀಯ ಮುಸಲ್ಮಾನ ಬಾಂಧವರು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಗುರುವಾರ ಮುಂಜಾನೆ ಈದ್ಗಾ ಮೈದಾನದಲ್ಲಿ ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸಿ ದುವಾ ಬೇಡುವ ಮೂಲಕ ಆಚರಿಸಿದರು. 

ಪಟ್ಟಣದ ಹಲವಾರು ಜಮಾತುಗಳ ಮುಖಂಡರು ಹಾಗೂ ಸಮುದಾಯದ ಜನರು ತಮ್ಮ ತಮ್ಮ ಭಾವುಟಗಳನ್ನು ತೆಗೆದುಕೊಂಡು ಪಟ್ಟಣದ ಪ್ರಮುಖ ಬೀದಿಗಳ ಮೂಲಕವಾಗಿ ಈದ್ಗಾ ಸ್ಥಳಕ್ಕೆ ಆಗಮಿಸಿದರು. 

ಮಹಾಲಿಂಗಪುರದ ದಾರೂಲ್ ಉಲೂಮ್ ಶಿಕ್ಷಣ ಸಂಸ್ಥೆಯ ಖಾರಿ ಜುಬೇರಸಾಬ ಬಕ್ರೀದ್ ಹಬ್ಬದ ವೈಶಿಷ್ಟ ಪೂರ್ಣ ಇತಿಹಾಸವನ್ನು ತಿಳಿಸುತ್ತ, ನಮಾಜ ಮತ್ತು ಪವಿತ್ರ ಕುತ್ಬಾ ಪಠಣ ಮಾಡಿ ನಂತರ ಕರುಣಾಮಯಿಯಾದ ಆ ದೇವರಲ್ಲಿ ಕಷ್ಟ ಸುಖಗಳ ಬಗ್ಗೆ ಕೋರಿಕೊಂಡರು. 

ಇದರ ಮುಂಚೆ ಮೌಲಾನಾ ಝಕ್ರಿಯಾಸಾಹಬ ಮತ್ತು ನಜೀರ್ ಅತ್ತಾರ, ದಾವಲಸಾಬ ನಗಾರ್ಚಿ, ನಬಿಸಾಬ ಯಕ್ಸಂಬಿ,ಜಮೀರ್ ಯಕ್ಸಂಬಿ ಹಲವಾರು ವಿಷಯಗಳು ಮತ್ತು ಕೇಂದ್ರ ಸರ್ಕಾರದ ಚುನಾವಣಾ ಆಯೋಗ ಹೊರಡಿಸಿರುವ ಎಸ್ ಆಯ್ ಆರ್ (ಗಣತಿ) ಬಗ್ಗೆ ಮುಸಲ್ಮಾನ ಬಾಂಧವರಲ್ಲಿ ಜಾಗೃತಿ ಮೂಡಿಸಿ,ಬರುವ ದಿನಗಳಲ್ಲಿಯೂ ಇದೆ ವಿಷಯವಾಗಿ ತಮ್ಮೆಲ್ಲರ ಸಭೆ ಕರೆದು ತಜ್ಞರಿಂದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಭೆಗೆ ತಿಳಿಸಿದರು. 

ಈ ಸಂದರ್ಭದಲ್ಲಿ ಸ್ಥಳೀಯ ಪೋಲೀಸ್ ಠಾಣಾಧಿಕಾರಿ ಕಿರಣ ಸತ್ತಿಗೇರಿ ಸ್ವತಃ ತಮ್ಮ ಸಿಬ್ಬಂದಿಗಳ ಜೊತೆಯಲ್ಲಿ ಬಿಗಿ ಬಂದೋಬಸ್ತ್‌ ಕೈಗೊಂಡರು. ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯದೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಪುರಸಭೆ ನೈರ್ಮಲ್ಯ ಮೇಲ್ವಿಚಾರಕ ಹಣ್ಮಂತ ಮಾಂಗ್ ಅವರನ್ನು ಸಮುದಾಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಮುಸ್ಲಿಂರು ತಮ್ಮ ಪೂರ್ವಜರ ಗದ್ದುಗೆಗಳಿಗೆ ತೆರಳಿ ಅವರ ಸಲುವಾಗಿ ಶಾಂತಿ ಕೋರಿ ದುವಾ ಬೇಡಿ ತಮ್ಮ ಜೀವಿತಾವಧಿಯ ಕರ್ತವ್ಯವನ್ನು ಮೆರೆದರು. 

ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಕಾರ್ಯದರ್ಶಿ ಶಮ್ಶುದ್ದೀನ್ ತೇರದಾಳ, ಮುಸ್ತಾಕ್ ಚಿಕ್ಕೋಡಿ, ನಜೀರ್ ಝಾರೆ, ಸಯ್ಯದ್ ಯಾದವಾಡ, ಮೀರಾ ತಟಗಾರ, ಸಿರಾಜ್ ಪೆಂಡಾರಿ, ಹಾಸಿಂ ಪೆಂಡಾರಿ, ನೂರ ಪೆಂಡಾರಿ, ರಫೀಕ್ ಜಂಗಿ, ಪೈಗಂಬರ್ ಪೆಂಡಾರಿ, ಮಹಮ್ಮದ್ ಪಾಂಡು, ಬಾಬು ಸನದಿ, ಉಸ್ಮಾನ್ ಪೆಂಡಾರಿ, ಬಂದೇನವಾಜ ಪಕಾಲಿ, ಬಂದೇನವಾಜ್ ಸಿಂದಗಿ, ರಸೂಲ್ ಸಾಂಗ್ಲಿಕರ, ರಫೀಕ್ ಮಾಲದಾರ, ಬಿಲಾಲ್ ನದಾಫ್, ಹಾಗೂ ಪಟ್ಟಣದ ಎಲ್ಲ ಮುಸ್ಲಿಂ ಸಮಾಜಗಳ ಜನರು ಉಪಸ್ಥಿತರಿದ್ದರು.