ನವದೆಹಲಿ, ಮಾ 24, ಕೋವಿಡ್ 19 ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ ಆರು ತಿಂಗಳ ವೇತನ ದಾನ ಮಾಡಲು ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ನಿರ್ಧರಿಸಿದ್ದಾರೆ. ಜತೆಗೆ ಮಹಾಕೂಟ ಟೋಕಿಯೊ ಒಲಿಂಪಿಕ್ಸ್ ಅನ್ನು ಮುಂದೂಡುವಂತೆಯೂ ಮನವಿ ಮಾಡಿದ್ದಾರೆ. ಈ ಮಧ್ಯೆ, ಈಗಾಗಲೇ ಹೊರಬಂದಿರುವ ದೇಶಗಳ ಅನುಪಸ್ಥಿತಿಯಲ್ಲಿ ಒಲಿಂಪಿಕ್ಸ್ ನಡೆಸಿದರೆ ಅದು ಅದರ ಮಹತ್ವವನ್ನು ಕಳೆದುಕೊಳ್ಳಲಿದೆ ಎಂದಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದಾಗಿ ಪೂರ್ವ ನಿಗದಿಯಂತೆ ನಡೆಯುವ ಬಗ್ಗೆ ಅನುಮಾನ ಉಂಟಾಗಿರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ 25 ವರ್ಷದ ಪೂನಿಯಾ ಪದಕ ಗೆಲ್ಲುವ ಭಾರತೀಯ ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದಾರೆ.2019ರ ವಿಶ್ವ ಚಾಂಪಿಯನ್ ಷಿಪ್ ಕಂಚಿನ ಪದಕ ವಿಜೇತ ಬಜರಂಗ್, ಸದ್ಯ ರೈಲ್ವೇಯಲ್ಲಿ ವಿಶೇಷ ಕರ್ತವ್ಯದಲ್ಲಿ ನಿರತರಾಗಿದ್ದಾರೆ. '' ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವವರಿಗೆ ನನ್ನ ಆರು ತಿಂಗಳ ವೇತನ ನೀಡಲು ತೀರ್ಮಾನಿಸಿದ್ದೇನೆ, '' ಎಂದು ಬಜರಂಗ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಇದು ಶ್ಲಾಘನೀಯ ಕಾರ್ಯ ಎಂದು ಪ್ರಶಂಸಿದ್ದಾರೆ. ಒಲಿಂಪಿಕ್ಸ್ ಗೂ ಮುನ್ನ ನಾವು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ 2-3 ತಿಂಗಳು ಇದರ ಪ್ರಭಾವ ಇರುವ ಸಾಧ್ಯತೆ ಇದೆ. ಹೀಗಾಗಿ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮುಂದೂಡುವುದೇ ಸೂಕ್ತ ಎಂದು ಅವರು ಹೇಳಿದ್ದಾರೆ.