ಹತ್ತರಗಿ ಹರಿಮಂದಿರದಲ್ಲಿ ಬೈಲಾಟ ಕಲಾವಿದರಿಗೆ ಸನ್ಮಾನ

Bailata artists honored at Hattaragi Harimandir

ಹತ್ತರಗಿ ಹರಿಮಂದಿರದಲ್ಲಿ ಬೈಲಾಟ ಕಲಾವಿದರಿಗೆ ಸನ್ಮಾನ  

ಯಮಕನಮರಡಿ 09: ಸ್ಥಳೀಯ ಜಾನಪದ ಹಾಗೂ ಬೈಲಾಟ ಕಲಾವಿದರಾದ ಗೋಪಾಲ ಚಪಣಿ ಇವರು ಸುಮಾರು 35 ವರ್ಷಗಳ ಕಾಲ ನಾಡಿನ ಉದ್ದಕ್ಕೂ ಹೆಸರಾಂತ ಜಾನಪದ ಬೈಲಾಟ ಕಲಾಕ್ಷೇತ್ರದಲ್ಲಿ ಅಪಾರ ಪ್ರದರ್ಶನಗಳನ್ನು ನೀಡಿ ಜನರಲ್ಲಿ ಜಾನಪದ ಹಾಗೂ ಬೈಲಾಟ ಕಲೆಗಳ ಬಗ್ಗೆ  ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಪತ್ರಿಕಾ ರಂಗದಲ್ಲಿ ಸಾಹಿತ್ಯ ರಂಗದಲ್ಲಿ ಮತ್ತು ಆಧ್ಯಾತ್ಮಿಕ ರಂಗದಲ್ಲಿ ಅಲ್ಲದೇ ಬಡಜನರನ್ನು ಮತ್ತು ಅಂಗವಿಕಲರನ್ನು ಗುರುತಿಸಿ ಅಂತಹವರಿಗೆ ಸರ್ಕಾರದಿಂದ ಬರುವ ಮಾಶಾಸನ ಇತ್ಯಾದಿಗಳನ್ನು ಅನೂಕೂಲ ಮಾಡಿಕೊಟ್ಟಿದ್ದಾರೆ. ಶಾಲಾ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ತಮ್ಮ ಸ್ವಂತ ಕವಿತೆಗಳನ್ನು ಮಕ್ಕಳಿಗೆ ಬರೆದುಕೊಟ್ಟು ಅವುಗಳನ್ನು ಓದಿ ಕವನವಾಚನ ಮಾಡಿದ ವಿದ್ಯಾರ್ಥಿಗಳಿಗೆ ತಮ್ಮದೆ ಆದ ನಾಲ್ಕು ಬಹುಮಾನಗಳನ್ನು ನೀಡುತ್ತಿದ್ದಾರೆ. ಅಪಾರ ಕವನ ಸಂಕಲನಗಳನ್ನು ಉಚಿತವಾಗಿ ವಿತರಿಸಿ ಮಕ್ಕಳಲ್ಲಿ ಸಾಹಿತ್ಯದ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇವರು ಬೀದಿ ನಾಟಕಗಳಲ್ಲಿ ಸ್ವರಚಿತ ಗೀತೆಗಳನ್ನು ಹಾಡುವುದರ ಜೊತೆಗೆ ಜನರಲ್ಲಿ ಆರೋಗ್ಯ ಶಿಕ್ಷಣ ಸ್ವಚ್ಛತೆ ದುಶ್ಚಟಗಳಿಂದ ಜನರ ಮೇಲೆ ಆಗುವ ಪರಿಣಾಮಗಳನ್ನು ತಮ್ಮ ಕವನದೊಂದಿಗೆ ಹಾಡಿ ಗ್ರಾಮಿಣ ಜನರಲ್ಲಿ ಜಾಗ್ರತೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದನ್ನು ಗುರುತಿಸಿ ಕರ್ನಾಟಕ ಸರ್ಕಾರವು 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ಇವರನ್ನು ಗುರುತಿಸಿ ಸದ್ಗುರು ಹರಿಕಾಕ ಗೋಸಾವಿ ಋಗ್ವೇಧಿ ವೈಷ್ಣವ ಮಠದ ಪೀಠಾಧಿಪತಿ ಡಾ. ಆನಂದ ಮಹಾರಾಜ ಗೋಸಾವಿಯವರು ದಿ. 8ರಂದು ಶ್ರೀಮಠದ ಹಿರಿಯ ಪೂಜ್ಯರಾಗಿದ್ದ ಹರಿಕಾಕಾ ಗೋಸಾವಿ ಇವರ ಜಯಂತ್ಯೋತ್ಸವದ ಅಂಗವಾಗಿ ಗೋಪಾಲ ಚಪಣಿ ಅವರನ್ನು ಆಡಳಿತ ಮಂಡಳಿ ಸರ್ವ ಭಕ್ತಾಧಿಗಳ ಸಮ್ಮುಖದಲ್ಲಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.