ರಾಜ್ಯ ಬಜೆಟ್ 2020 : ಸ್ಯಾಂಡಲ್ ವುಡ್ ಗೆ ಸಿಹಿ

ಬೆಂಗಳೂರು, ಮಾ 05,ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಿರುವ   2020ರ ರಾಜ್ಯ ಬಜೆಟ್ ನಲ್ಲಿ 500 ಕೋಟಿ ರೂ.ಗಳ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಬೆಂಗಳೂರಿನಲ್ಲಿ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ನಿರ್ಮಾಣ ಮಾಡುವುದಾಗಿ  ಘೋಷಿಸುವ ಮೂಲಕ ಚಂದನವನಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.   ರಾಕಿಂಗ್ ಸ್ಟಾರ್ ಯಶ್ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆ ವೇಳೆ ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಿಸಿ ಎಂದು ಬೇಡಿಕೆ ಮುಂದಿಟ್ಟಿದ್ದರು. ಒಂದು ವೇಳೆ ಈ ಕೆಲಸ ಸಾಧ್ಯವಾದರೆ ಜಗತ್ತು ನಮ್ಮತ್ತ ತಿರುಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಜೊತೆಗೆ, ನಮ್ಮ ಹುಡುಗರಿಗೆ ಶಕ್ತಿಯಿದೆ. ಸ್ವಲ್ಪ ಹುರಿದುಂಬಿಸಬೇಕು ಎಂದು ಮನವಿ ಮಾಡಿದ್ದರು. ಬಹಳ ಕಾಲದಿಂದ ಈ ಸ್ಟುಡಿಯೋ ವಿಚಾರ ಮುಂದೆ ಹೋಗುತ್ತಲೆ ಇದೆ. ನಾವು ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಸ್ಟುಡಿಯೋಗಾಗಿ ಬೇರೆ ರಾಜ್ಯಗಳಿಗೆ  ಹೋಗಿ ಹೋಗಿ ಸಾಕಾಗಿದೆ. ಹಾಗಾಗಿ ನಮ್ಮಲ್ಲೇ ಒಂದು ಸ್ಟುಡಿಯೋ ಕಟ್ಟಿಸಿ ನಮ್ಮ ಉದ್ಯಮವು ಬೆಳೆಯುತ್ತೆ ಎಂದು ಕೂಡ ಅವರು ಹೇಳಿದ್ದರು.  ಬಹುದಿನಗಳಿಂದ ಫಿಲಂ ಸಿಟಿ ನಿರ್ಮಾಣ ವಿಚಾರ ಮುಖ್ಯಮಂತ್ರಿಯವರ  ಮರ್ಜಿಗೆ ಸಿಲುಕಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದಾಗ ಅದೇ ಫಿಲಂ ಸಿಟಿಯನ್ನು ರಾಮನಗರಕ್ಕೆ ವರ್ಗಾಯಿಸಲಾಗಿತ್ತು. ಇನ್ನು ಇದೀಗ ಯಡಿಯೂರಪ್ಪ ಸಿಎಂ ಆಗಿದ್ದು, ಬಜೆಟ್ ಮಂಡಿಸಿದ್ದು, ಫಿಲಂ ಸಿಟಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.  ಮುಖ್ಯಮಂತ್ರಿಯವರ ಈ ಘೋಷಣೆ ಈ  ಬಾರಿಯಾದರೂ ಫಿಲಂ ಸಿಟಿ ನಿರ್ಮಾಣವಾದೀತು ಎಂಬ ನಿರೀಕ್ಷೆಯನ್ನು   ಸಿನಿಮಾ ನಿರ್ಮಾಪಕರು, ನಿರ್ದೇಶಕರು, ನಟನಟಿಯರು, ತಂತ್ರಜ್ಞರಲ್ಲಿ ಮತ್ತು ಅಭಿಮಾನಿಗಳಲ್ಲಿ ಹುಟ್ಟಿಸಿದೆ.