ಬೆಂಗಳೂರು, ಮಾರ್ಚ್.5, ಬಜೆಟ್ ಮಂಡನೆ ವಿಚಾರ ಬಂದಾಗ ಮಾಜಿ ಪ್ರಧಾನಮಂತ್ರಿಗಳಾದ ಮೊರಾರ್ಜಿ ದೇಸಾಯಿ ಮತ್ತು ಡಾ.ಮನಮೋಹನ್ ಸಿಂಗ್ ಅವರ ಹೆಸರುಗಳು ಪ್ರಧಾನವಾಗಿ ಕೇಳಿ ಬರುತ್ತದೆ. ಅದೇ ರೀತಿ ಬಜೆಟ್ ಎಂಬ ಮೂರು ಅಕ್ಷರದ ಪದ ಕೇಳಿದಾಗ ಹಿರಿಯ ನ್ಯಾಯವಾದಿ ಆರ್ಥಿಕ ತಜ್ಞ ನಾನಿ ಪಾಲ್ಕಿವಾಲ ಹೆಸರು ಮುಂಚೂಣಿಯಲ್ಲಿರುತ್ತದೆ. ಕೇಂದ್ರ ಸರ್ಕಾರದಲ್ಲಿ ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವರ ಸಾಲಿನಲ್ಲಿ ಮೊರಾರ್ಜಿ ದೇಸಾಯಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರನ್ನು ಹೊರತುಪಡಿಸಿದರೆ ಆರ್.ಬಿ.ಐ ಗವರ್ನರ್ ಆಗಿ, ಐಎಂಎಫ್ ಮತ್ತು ವಿಶ್ವ ಬ್ಯಾಂಕಿನಲ್ಲಿ ಕೆಲಸ ಮಾಡಿ, ಪಿ ವಿ ನರಸಿಂಹ ಮಂತ್ರಿ ಮಂಡಲದಲ್ಲಿ ಹಣಕಾಸು ಸಚಿವರಾಗಿ ನಂತರ ಮುಂದೆ ಪ್ರಧಾನಿಯಾದ ಮನಮೋಹನ್ ಸಿಂಗ್ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ನಂತರದ ಸ್ಥಾನಗಳಲ್ಲಿ ನಿಲ್ಲುತ್ತಾರೆ. ಇನ್ನೂ ಕಬ್ಬಿಣದ ಕಡಲೆಯಾಗಿರುವ ಬಜೆಟ್ ನಲ್ಲಿನ ಲೋಪ ದೋಷ, ಒಳಗಿನ ಮುಚ್ಚುಮರೆ ಮುಂತಾದ ವಿಚಾರಗಳನ್ನು ಹೆಸರಾಂತ ಆರ್ಥಿಕ ವಿಶ್ಲೇಷಣಾಗಾರ ಎಂದೇ ಗುರುತಿಸಿಕೊಂಡಿದ್ದ ನಾನಿ ಪಾಲ್ಕೀವಾಲ ದೇಶದ ಉದ್ದಗಲಕ್ಕೂ ಭಾಷಣ ಮಾಡಿಕೊಂಡು ಆ ಮೂಲಕವೇ ಪ್ರಧಾನಿ, ಹಣಕಾಸು ಸಚಿವರಿಗಿಂತಲೂ ಎತ್ತರದ ಜನಪ್ರಿಯತೆ ಗಳಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಪ್ರತಿ ವರ್ಷ ಬಜೆಟ್ ಸಭೆಗೆ ಜನ ಹೆಚ್ಚಾಗಿ ಸೇರುತ್ತಿದ್ದರು. ಕಡೆಗೆ ಅವರ ಬಾಷಣದ ಸ್ಥಳವನ್ನು ನ್ಯಾಷನಲ್ ಹೈಸ್ಕೂಲ್ ಮೈದಾನಕ್ಕೆ ವರ್ಗಾವಣೆ ಮಾಡಿದ್ದು ಅವರ ಜನಪ್ರಿಯತೆಗೆ, ವಿಶ್ಲೇಷಣೆಗೆ ಹಿಡಿದ ಕನ್ನಡಿಯಾಗಿತ್ತು.