ಆರ್ಥಿಕ ಚೇತರಿಕೆಗೆ ಸ್ಪಂದಿಸದ, ಜನತೆಯ ಸಂಕಷ್ಟ ಹೆಚ್ಚಿಸಿದ ಬಜೆಟ್ : ಸಿಪಿಐ (ಎಂ) ಖಂಡನೆ

ಬೆಂಗಳೂರು, ಮಾ 6 ,ರಾಜ್ಯ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವುದನ್ನು ಬಜೆಟ್ ಎತ್ತಿ ತೊರಿಸಿದ್ದು,  ರಾಜ್ಯದ ಆಂತರಿಕ ಉತ್ಪನ್ನದ ಅಭಿವೃದ್ದಿ ದರ ೭.೮ ರಿಂದ ೬.೮ಕ್ಕೆ ಕುಸಿದಿದೆ. ಸತತ ಬರ ಹಾಗೂ ನೆರೆಗೆ ರಾಜ್ಯದ ಜನತೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯದ ಪರಿಸ್ಥಿತಿ ಗಮನಿಸಿದರೆ ಆತಂಕದ ವಾತಾವರಣ ನಿರ್ಮಾಣವಾಗಿರುವುದು ಸ್ಪಷ್ಟವಾಗಿದೆ ಎಂದು ಸಿಪಿಐಎಂ ಕಳವಳ ವ್ಯಕ್ತಪಡಿಸಿದೆ. ರಾಜ್ಯ ಬಜೆಟ್, ಆರ್ಥಿಕ ಹಿನ್ನಡೆಯ ಚೇತರಿಕೆಗಾಗಲಿ ಅಥವಾ ಜನತೆಯ ಸಂಕಷ್ಟ ನಿವಾರಣೆಗಾಗಲೀ ಸ್ಪಂದಿಸುವಲ್ಲಿ ವಿಫಲವಾಗಿದೆ.  ತೊಂದರೆಯಲ್ಲಿರುವ ಜನತೆಯ ಮೇಲೆ ಮತ್ತೆ ಹೊರೆ ಹೆಚ್ಚಿಸಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸರ್ಕಾರದ ಧೋರಣೆಯನ್ನು ಬಲವಾಗಿ ಖಂಡಿಸಿದೆ. ಕೇಂದ್ರ ಸರ್ಕಾರ ರಾಜ್ಯವನ್ನು ಮತ್ತೆ ಆರ್ಥಿಕ ಸಂಪನ್ಮೂಲಗಳ ಕೊರತೆಗೆ ದೂಡಿದ್ದು, ಹಣಕಾಸು ಆಯೋಗದಂತೆ ಕೇಂದ್ರ ತೆರಿಗೆಯಲ್ಲಿನ ರಾಜ್ಯದ ಪಾಲು ೧೧೨೧೫ ಕೋಟಿ ರೂಗಳು ಕಡಿತವಾಗಲಿದೆ ಎಂಬ ಅಂಶ ಕಳವಳಕಾರಿಯಾಗಿದೆ. ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ವಿಪರೀತ ಹೆಚ್ಚಿಸಿದೆ. ರಾಜ್ಯ ಸರಕಾರ ಬಜೆಟ್ ಪೂರ್ವದಲ್ಲಿಯೇ ಬಸ್ ಪ್ರಯಾಣದರ ಹಾಗೂ ವಿದ್ಯುತ್ ದರ, ಇದೀಗ ಈ ಬಜೆಟ್ ನಲ್ಲಿ ಮತ್ತೆ ಪೆಟ್ರೋಲ್ ಬೆಲೆ ೧.೬೦ ರೂ ಹಾಗು  ಡೀಸಲ್ ಬೆಲೆಯನ್ನು ೧.೫೯ ರೂ ಹೆಚ್ಚಿಸಿದೆ. ಈ ಎಲ್ಲವುಗಳಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಮತ್ತೆ ಗಗನಮುಖಿಯಾಗಲಿವೆ ಎಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜು ಹೇಳಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಡಿತರ ಚೀಟಿಗೆ ನೀಡಲಾಗುತ್ತಿದ್ದ ಅಕ್ಕಿಯನ್ನು ವ್ಯಕ್ತಿಗೆ ತಲಾ ಎರಡು ಕೇಜಿ ಕಡಿತಗೊಳಿಸಿ ಮುಕ್ತ ಮಾರುಕಟ್ಟೆಯ ಕಡೆ ದೂಡಿದೆ ಮತ್ತು ಅದಕ್ಕಾಗಿ ನೀಡಲಾಗುತ್ತಿದ್ದ ಬಜೆಟ್ ಅನುದಾನವನ್ನು ೧,೨೩೪ ಕೋಟಿ ರೂ ಕಡಿತಗೊಳಿಸಿದೆ.

ಇದರೊಂದಿಗೆ ಕೊರತೆ ಬಜೆಟ್ ಹಾಗೂ ಸುಮಾರು ೫೩ ಸಾವಿರ ಕೋಟಿ ರೂಪಾಯಿಗಳ ಹೊಸ ಸಾಲದ ಭಾರವನ್ನು ಜನತೆ ಭರಿಸಬೇಕಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ತಲಾ ಆದಾಯ ಪ್ರತಿ ದಿನ ೩೫-೪೦ ರೂಗಳಿಗಿಂತ ಕಡಿಮೆ ಇರುವ ಕೋಟ್ಯಾಂತರ, ಕೃಷಿಕೂಲಿಕಾರರು, ಬಡ ರೈತರು, ಕಾರ್ಮಿಕ ಕುಟುಂಬಗಳ ಆದಾಯವನ್ನು ಹೆಚ್ಚಿಸುವ ಯಾವುದೇ ಕ್ರಮಕೈಗೊಳ್ಳದ ಬಜೆಟ್, ಸಂಕಟಗಳ ಹೊರೆಯ ಸರಮಾಲೆಯನ್ನು ಹೇರಲು ಮಾತ್ರವೇ ಸಫಲವಾಗಿದೆ. ಅದೇ ವೇಳೆ, ಸೇವಾ ವಲಯಕ್ಕೆ ನೀಡಿರುವ ತೆರಿಗೆ ರಿಯಾಯಿತಿಯನ್ನು ರದ್ದುಪಡಿಸಲಾಗದ ಅಸಹಾಯಕತೆಯನ್ನು ತೋರಿದೆ ಎಂದಿದ್ದಾರೆ. ಜನತೆ ಪರಿಹಾರಕ್ಕಾಗಿ ಹಾತೊರೆಯುತ್ತಿರುವಾಗ ನೆರೆ ಪರಿಹಾರಕ್ಕೆ ಮೀಸಲಿಟ್ಟ ೬೧೦೮ ಕೋಟಿ ರೂಗಳಲ್ಲಿ ಕೇವಲ ೩೪೨೩ ಕೋಟಿ ರೂಗಳನ್ನು ಮಾತ್ರ ಇದುವರೆಗೆ ಖರ್ಚು ಮಾಡಿರುವ ಅಂಶವು ರಾಜ್ಯ ಬಿಜೆಪಿಯ ಅದಕ್ಷ ಆಡಳಿತವನ್ನು ಬಹಿರಂಗ ಪಡಿಸಿದೆ. ಒಟ್ಟಾರೆ ಕೇಂದ್ರ ಹಾಗೂ ರಾಜ್ಯ ಬಿಜೆಪಿಯ ಸರ್ಕಾರಗಳು ರಾಜ್ಯವನ್ನು ದಿವಾಳಿಯತ್ತ ದೂಡುತ್ತಿವೆ ಎಂಬದನ್ನು ಬಜೆಟ್ ತೋರುತ್ತದೆ ಎಂದು ಆರೋಪಿಸಿದ್ದಾರೆ.  ರೈತರು, ಕಾರ್ಮಿಕರು, ವಿಧ್ಯಾರ್ಥಿ ಯುವಜನರ ದಲಿತರ, ಅಲ್ಪ ಸಂಖ್ಯಾತರ ಬೇಡಿಕೆಗಳಿಗೆ ಸ್ಪಂದಿಸದ ರಾಜ್ಯ ಬಜೆಟ್ ತನ್ನ ನವ ಉದಾರವಾದಿ ಆರ್ಥಿಕ ನೀತಿಗಳ ಭಾಗವಾಗಿ ಬಂದರುಗಳ, ಮೆಟ್ರೋ, ಆರೋಗ್ಯ ಯೋಜನೆ, ಮುಂತಾದವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಹೆಸರಿನಲ್ಲಿ ಖಾಸಗೀಕರಣಕ್ಕೆ ನಾಂದಿ ಹಾಡಿದೆ. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಅಭಿವೃದ್ಧಿ ಯೋಜನೆಗಳಿಗೆ ಶೇ ೨೭ ರಷ್ಠಿರುವ ಅವರ ಜನಸಂಖ್ಯೆಗನುಗುಣವಾಗಿ ನೀಡದೇ ಕಳೆದ ಬಜೆಟ್ ನಲ್ಲಿ ನೀಡಿದ್ದ ಹಣಕ್ಕಿಂತ ಸುಮಾರು ೩,೦೦೦ ಕೋಟಿ ಕಡಿಮೆ ಹಣ ನೀಡಿದೆ. ದಲಿತರು ಮತ್ತು ದಲಿತ ಮಹಿಳೆಯರ ಸಾಲಮನ್ನಾ ಹಾಗೂ ದೇವದಾಸಿ ಮಹಿಳೆಯರ ನೆರವು ಘೋಷಿಸಿಲ್ಲ ಎಂದು ಹೇಳಿದ್ದಾರೆ.