ಬೆಂಗಳೂರು, ಮಾ 11, ಸಂವಿಧಾನದ ಮೇಲಿನ ಚರ್ಚೆಯಲ್ಲಿ ರಾಮಾಯಣ ಮಹಾಭಾರತದ ಪದ್ಯಗಳನ್ನು ವಾಚಿಸಿದ ಜೆಡಿಎಸ್ನ ಭೋಜೇಗೌಡ ಅವರ ಮಾತುಗಳು ಮೇಲ್ಮನೆಯ ಕಲಾಪದಲ್ಲಿ ರಸವತ್ತಾಗಿದ್ದವು.ಆರ್.ಎಸ್.ಎಸ್.ಪ್ರಾರ್ಥನೆ ಬರೀ ಆರ್ಎಸ್ಎಸ್ನ ಪ್ರಾರ್ಥನೆಯಷ್ಟೇ. ದೇಶದ ಪ್ರಾರ್ಥನೆಯಲ್ಲ. ರಾಷ್ಟ್ರಪ್ರೇಮ ಬರೀ ಆರ್ಎಸ್ಎಸ್ನ ಸ್ವತ್ತಲ್ಲ. ಅವರಷ್ಟೇ ರಾಷ್ಟ್ರಪ್ರೇಮವನ್ನು ಗುತ್ತಿಗೆ ಪಡೆದಿಲ್ಲ ಎಂದು ಜೆಡಿಎಸ್ನ ಭೋಜೇಗೌಡ ಕುಟುಕಿದರು.ಆಗ ಕಾಂಗ್ರೆಸ್ನ ಹೆಚ್.ಎಂ.ರೇವಣ್ಣ, ಅವರದ್ದಷ್ಟೇ ಕಾಪಿರೈಟ್ಸಾ ಎಂದು ಹೇಳಿದರು.ಆಗ ಸಚಿವ ಬಿ.ಸಿ.ಪಾಟೀಲ್, ಪೂರ್ತಿ ಪ್ರಾರ್ಥನೆ ಹೇಳಿ ಅರ್ಥ ಹೇಳಿ ಎಂದರು. ಆಗ ಭೋಜೇಗೌಡ ಸ್ವಲ್ಪವಷ್ಟೇ ಓದಿ ನಾನು ಸಮಯ ವ್ಯರ್ಥ ಮಾಡುವುದಿಲ್ಲ ಎಂದಾಗ ಮತ್ತೆ ಬಿ.ಸಿ.ಪಾಟೀಲ್, ಹಾಗಾದರೆ ಇಲ್ಲಿಯವರೆಗಿನ ತಮ್ಮ ಮಾತುಗಳು ಅಸಂವಿಧಾನಿಕವೇ ಎಂದು ಕುಟುಕಿದರು.
ಮಾತು ಮುಂದುವರೆಸಿದ ಭೋಜೇಗೌಡ, ರಾಮನ ಆಡಳಿತದಲ್ಲಿ ಲೋಪದೋಷಗಳ ಬಗ್ಗೆ ಜನರಿಂದಲೇ ರಾಮ ಕೇಳುತ್ತಿದ್ದ. ಹಾಗೆಯೇ ಅಗಸನ ಮಾತು ಕೇಳಿ ಸೀತೆಯನ್ನು ಕಾಡಿಗೆ ಅಟ್ಟಿದ. ರಾಮನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳದಿದ್ದರೆ ಹೇಗೆ? ಎಂದು ವಾಲ್ಮೀಕಿ ರಾಮಾಯಣದ ಜಾನಕಿ ಅರಣ್ಯವಾಸದ ಬಗ್ಗೆ ಕಂದಪದ್ಯ ವಾಚಿಸಿದರು.ಆಗ ಕೌರವ ಸೀತೆಯನ್ನು ಹೊತ್ತೊಯ್ದರು ಎಂದು ಬಿ.ಸಿ.ಪಾಟೀಲ್ ಅವರನ್ನುದ್ದೇಶಿಸಿ ಎಚ್.ಎಂ.ರೇವಣ್ಣ ಹೇಳಿದಾಗ, ಭೋಜೇಗೌಡರು ಇದು ರಾಮಾಯಣ ಮಹಾಭಾರತ ಅಲ್ಲ ಎಂದರು. ತಕ್ಷಣವೇ ಬಿ.ಸಿ.ಪಾಟೀಲ್ , ಹೊತ್ತೊಯ್ದರು ಏನು ಮಾಡಲ್ಲ ಬಿಡಿ ಎಂದು ನಕ್ಕರು. ಮಾತು ಮುಂದುವರೆಸಿದ ಭೋಜೇಗೌಡ, ಕರುಣನ ಲಾಯಲ್ಟಿ ಈ ಪ್ರಜಾಪ್ರಭುತ್ವದಲ್ಲಿ ಇದೆಯಾ? ಎಂದು ಪ್ರಶ್ನಿಸಿ "ಎಲ್ಲೋ ಹುಡುಕಿದೆ ಇಲ್ಲದ ದೇವರ..."ಪದ್ಯವನ್ನು ವಾಚಿಸಿ ಇನ್ನು ತಾವು ಸಂವಿಧಾನದ ಬಗ್ಗೆ ಶುರು ಮಾಡಿಲ್ಲ. ಮುಂದೆ ಮಾಡುತ್ತೇನೆ ಎಂದಾಗ ಸಭಾಪತಿಗಳು ಐದು ನಿಮಿಷದೊಳಗೆ ಮಾತು ಮುಗಿಸಿ ಎಂದರು.ಆಗ ಎಚ್.ಎಂ.ರೇವಣ್ಣ, ಗೋವಿಂದರಾಜು ಹಾಗಾದರೆ ನೀವಿನ್ನೂ ಸಂವಿಧಾನಕ್ಕೆ ಬರಲಿಲ್ಲವಾ. ನೀವು ಮಾತನಾಡುತ್ತೀರಿ ನಾವು ಊಟ ಮಾಡಿಕೊಂಡು ಬರುತ್ತೇವೆ ಎಂದು ಕಾಲೆಳೆದರು.
ಆಗ ಭೋಜೇಗೌಡರ ಮಾತು ಕವನ ವಾಚನವನ್ನು ಬಿಜೆಪಿಯ ರವಿಕುಮಾರ್ ಸದನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಹಾಡಿಹೊಗಳಿದರು. ಆಗ ಹೆಚ್.ಎಂ.ರೇವಣ್ಣ,ಇದರಲ್ಲಿ ಏನೋ ಒಳಮರ್ಮ ಇದೆ. ನಿಮ್ಮ ಕಡೆ ಬರ್ತಿದಾರೆ ಎನ್ನುವ ಅನುಮಾನ ಮೂಡುತ್ತಿದೆ ಎಂದರು.ಆಗ ಬಿಜೆಪಿಯ ಆಯನೂರು ಬರುತ್ತಾ ಇದ್ದಾರಲ್ಲ ಬಂದಾಗಿದೆ ಎಂದರು. ಆಗ ಜಯಮ್ಮ ಮಾತನಾಡಿ, ಸೀತೆಯನ್ನು ಅಪಹರಿಸಿಕೊಂಡು ಹೋದಂತೆ ಈ ಭೋಜೇಗೌಡರನ್ನು ಅಪಹರಿಸಿಕೊಂಡು ಹೋಗಿ ಎಂದು ನಕ್ಕಾಗ ಸದನ ನಗೆಗಡಲಲ್ಲಿ ತೇಲಿತು.