ಬೆಂಗಳೂರು, ಮೇ 7,ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳಿಗೆ 1610 ಕೋಟಿ ನೆರವು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಹಲವು ಮುಖಂಡರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಇನ್ನೂ ಕೆಲವು ವರ್ಗಗಳಿಗೆ ನೆರವು ನೀಡುವಂತೆ ಮನವಿ ಮಾಡಿದರು.ಗುರವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ ಶಾಸಕರಾದ ಶಿವರಾಜ್ ಪಾಟೀಲ್, ರಾಜುಗೌಡ, ಪ್ರತಾಪ್ ಗೌಡ ಪಾಟೀಲ್, ಎಂಎಲ್ ಸಿ ರವಿಕಮಾರ್ ಅವರ ನೇತೃತ್ವದ ನಿಯೋಗ, ವಿಶೇಷ ಪ್ಯಾಕೇಜ್ ಘೋಷಣೆಯಿಂದ ಲಕ್ಷಾಂತರ ಬಡವರಿಗೆ ಅನುಕೂಲವಾಗಲಿದೆ. ಆದರೆ ಈ ಪ್ಯಾಕೇಜ್‌ನಲ್ಲಿ ಇನ್ನೂ ಕೆಲ ವರ್ಗಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅಂತಹ ವರ್ಗಗಳನ್ನೂ ಗಮನಿಸಬೇಕು.
ಆ ವರ್ಗಕ್ಕೂ ನೆರವು ಘೋಷಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿತು.ಮುಖ್ಯಮಂತ್ರಿ ಭೇಟಿ ಬಳಿಕ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ನಿನ್ನೆ ಮುಖ್ಯಮಂತ್ರಿ ಹಲವು ವರ್ಗಗಳಿಗೆ ನೆರವು ಘೋಷಿಸಿದ್ದಾರೆ. ನೆರವು ಘೋಷಿಸಿದ ರಾಜ್ಯಗಳಲ್ಲಿ ನಮ್ಮ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಅದೇ ರೀತಿ ಮುಖ್ಯಮಂತ್ರಿಗಳಲ್ಲಿ ಯಡಿಯೂರಪ್ಪ ಅವರೇ ಮೊದಲಿಗರಾಗಿದ್ದಾರೆ. ನಮ್ಮ ಸರ್ಕಾರ ಎಲ್ಲರಿಗೂ ನ್ಯಾಯವನ್ನು ಒದಗಿಸಿದೆ. ಆದರೆ ಇನ್ನು ಕೆಲವು ವರ್ಗಗಳನ್ನು ನೆರವಿನಿಂದ ಕೈಬಿಡಲಾಗಿದೆ. ಹೀಗಾಗಿ ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನೆರವು ಘೋಷಿಸುವಂತೆ ಮನವಿ ಮಾಡಿದ್ದೇವೆ ಎಂದರು.ಕಮ್ಮಾರ, ಕೊರಚ, ಮೇದಾರ, ಕುಂಬಾರ, ಚಮ್ಮಾರ, ದರ್ಜಿ, ಅಡಿಗೆ ಕೆಲಸ ಮಾಡುವವರಿಗೂ ಪ್ಯಾಕೇಜ್ ಘೋಷಣೆಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಗ್ರಾಮ ಪಂಚಾಯತ್ ಚುನಾವಣೆಗಳು ಹತ್ತಿರ ಬರುತ್ತಿವೆ. ಲಾಕ್ ಡೌನ್ ಸಂದರ್ಭದಲ್ಲಿ ಚುನಾವಣೆ ಎದುರಿಸುವುದು ಕಷ್ಟ. ಹೀಗಾಗಿ ಗ್ರಾಮ ಪಂಚಾಯತ್ ಸೇರಿದಂತೆ ಇತರ ಚುನಾವಣೆ ಮುಂದೂಡಬೇಕು ಎಂದು ಅವರು ಇದೇ ವೇಳೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.