ಅನಂತ್ ಕುಮಾರ್ ಹೆಗಡೆ ಹೇಳಿಕೆ ಹಿಂದೆ ಬಿಜೆಪಿ ಸಂಚು - ಉಗ್ರಪ್ಪ

ಬೆಂಗಳೂರು, ಫೆ 4 ,ಇಡೀ ವಿಶ್ವಕ್ಕೆ ಶಾಂತಿಮಂತ್ರ ಬೋಧಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಬಿಜೆಪಿ ನಾಯಕರು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದು, ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಯ ಹಿಂದೆ ಬಿಜೆಪಿ ಸಂಚಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಗಾಂಧೀಜಿ ಅವರಿಗೆ ಅಪಮಾನ ಮಾಡಿದ್ದಾರೆ. ರಾಜ್ಯ, ದೇಶದ ಜನರ ಬಳಿ ಅವರು ಕ್ಷಮೆ ಕೇಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅನಂತ್ ಕುಮಾರ್ ಹೆಗಡೆ ಕ್ಷಮೆ ಕೇಳಿಲ್ಲ. ಇದು ಅತ್ಯಂತ ನೋವಿನ ಸಂಗತಿ ಎಂದರು.  

ಅನಂತ ಕುಮಾರ್ ಹೆಗಡೆ ಕ್ಷಮೆ‌ ಕೇಳುವುದು ಸರಿಯಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೆಗಡೆ ಅವರ ಪರ ವಕಾಲತ್ತು ವಹಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಬಿಜೆಪಿ ವ್ಯವಸ್ಥಿತವಾಗಿಯೇ ಅನಂತ್ ಕುಮಾರ್ ಹೆಗಡೆ ಅವರಿಂದ ಉದ್ದೇಶದಿಂದ ಇಂತಹ ಹೇಳಿಕೆ ಕೊಡಿಸಿದೆ. ಈ ಹಿಂದೆ ಅಂಬೇಡ್ಕರ್ ಬಗ್ಗೆ, ಸಂವಿಧಾನದ ಕುರಿತು ಅಪಮಾನ ಮಾಡಲಾಗಿತ್ತು. ಈಗ ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಅವಮಾನ ಮಾಡಲಾಗಿದೆ ಎಂದು ಕಿಡಿಕಾರಿದರು.

ಗಾಂಧೀಜಿ ಒಂದು ವೇಳೆ ಮನುವಾದಿಯಾಗಿದಿದ್ದರೆ ಮನುವಾದಿ ಬಿಜೆಪಿ ಗಾಂಧೀ ಅವರ ಪರ ವಕಾಲತ್ತು ವಹಿಸುತ್ತಿತ್ತು. ರಾಮನನ್ನು ಜಪ ಮಾಡುವ ಬಿಜೆಪಿ ನಾಯಕರು ವಾಲ್ಮೀಕಿ ಬೋವಿ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಸಂತೋಷ್ ಎನ್ನುವುದಕ್ಕಿಂತ ಅಸಂತೋಷ್ ಎಂದು ಕರೆಯುವುದು ಸೂಕ್ತ. ದೇಶದಲ್ಲಿ ಶೇ. 68 ರಷ್ಟು ಜನ ವಲಸಿಗರಿದ್ದಾರೆ. ಅದರಲ್ಲಿ ರಾಮಾಯಣ ಬರೆದ ವಾಲ್ಮೀಕಿ ವಂಶಸ್ಥರು ಇದ್ದಾರೆ ಎಂದಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಅವರು ಮಾತನಾಡಿದ್ದು, ಇದು ಸಂವಿಧಾನದ ಪ್ರಕಾರ ಅಪರಾಧ ಎಂದರು. ವಾಲ್ಮೀಕಿ  ಅವರ ಅವಹೇಳನಕಾರಿಯಾಗಿ ಮಾತನಾಡಿದ್ದರೂ ಸಹ ಸಚಿವ ಶ್ರೀರಾಮುಲು, ವಾಲ್ಮೀಕಿ ಸಮಾಜದ ಸ್ವಾಮೀಜಿಗಳು ಏಕೆ ಬಾಯಿಬಿಡುತ್ತಿಲ್ಲ. ಬಿಜೆಪಿ ನಾಯಕರು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಬಳಿ ಕ್ಷಮೆ‌ ಕೋರಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.