ರಾಹುಲ್ ಹೇಳಿಕೆಗೆ ಬಿಜೆಪಿ ಖಂಡನೆ: ಲೋಕಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ನವದೆಹಲಿ, ಫೆ 7, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತೀವ್ರವಾಗಿ ಖಂಡಿಸಿದ ನಂತರ ಲೋಕಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಮಧ್ಯಾಹ್ನ 2 ಗಂಟೆಗೆ ಎರಡನೇ ಬಾರಿ ಸದನ ಸಮಾವೇಶಗೊಂಡ ನಂತರ, ಸಂಸದೀಯ ವ್ಯವಹಾರಗಳ ಸಚಿವರು ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿದರು. ‘ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ನಾವು ಸಾರ್ವಜನಿಕವಾಗಿ ಖಂಡಿಸುತ್ತೇವೆ. ಈ ಹೇಳಿಕೆಗಳನ್ನು(ದಂಡ-ಕೋಲು) ಯಾರೊಬ್ಬರೂ ಒಪ್ಪುವಂತಹುದ್ದಲ್ಲ ಎಂದು ಜೋಶಿ ಹೇಳಿದರು. ಪ್ರಶ್ನೊತ್ತರ ವೇಳೆಯಲ್ಲಿ ರಾಹುಲ್ ಗಾಂಧಿ ಮಾಡಿರುವ ‘ದಂಡ’ ಹೇಳಿಕೆಯು ಆಡಳಿತ ಪಕ್ಷದ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಇದರಿಂದ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮುಂದೂಡಿದರು. ಕಾಂಗ್ರೆಸ್ ಸದಸ್ಯರೊಬ್ಬರು ಸಚಿವ ಹರ್ಷವರ್ಧನ್  ಕೈಯಿಂದ ಕಾಗದಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೆ, ಸಚಿವರ ಮೇಲೆ ದಾಳಿ ಮಾಡಲು ಸಹ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಪೀಕರ್ ಅವರೇ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಸಭಾಧ್ಯಕ್ಷರ ಪೀಠದಲ್ಲಿದ್ದ ಎ ರಾಜಾ ಅವರು ಸದನವನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ ಎಂದು ಘೋಷಿಸಿದರು. ಈ ಮೊದಲು ಸದನವನ್ನು ಎರಡು ಬಾರಿ ಮಧ್ಯಾಹ್ನ 1 ಗಂಟೆಗೆ ಹಾಗೂ 2 ಗಂಟೆವರೆಗೆ ಮುಂದೂಡಲಾಗಿತ್ತು. ಪ್ರಶ್ನೋತ್ತರ ವೇಳೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತು ಪ್ರಶ್ನೆ ಕೇಳಲು ರಾಹುಲ್ ಗಾಂಧಿ ಎದ್ದು ನಿಂತಾಗ, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ರಾಹುಲ್ ಗಾಂಧಿ ವಿಲಕ್ಷಣ ಹೇಳಿಕೆಯನ್ನು ಸದನ ಖಂಡಿಸಬೇಕು ಎಂದು ಹೇಳಿದರು.