ವಿಧಾನ ಪರಿಷತ್‌ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಲಕ್ಷ್ಮಣ್ ಸವದಿ ನಾಮಪತ್ರ ಸಲ್ಲಿಕೆ; ಅವಿರೋಧ ಆಯ್ಕೆ ಖಚಿತ

ಬೆಂಗಳೂರು,ಫೆ 5, ರಿಜ್ವಾನ್ ಅರ್ಷದ್  ಶಾಸಕರಾಗಿ ಆಯ್ಕೆಯಾದುದರಿಂದ ತೆರವಾಗಿರುವ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉಪಮುಖ್ಯಮಂತ್ರಿ ಲಕ್ಷಣ್ ಸವದಿ ಬುಧವಾರ ನಾಮಪತ್ರ ಸಲ್ಲಿಸಿದರು.ವಿಧಾನ ಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಕ್ಷಿ ಅವರಿಗೆ ಸಂಪುಟದ ಸಹ ಸಚಿವರು, ನಾಯಕರ ಜೊತೆ ಆಗಮಿಸಿ ಸವದಿ ನಾಮಪತ್ರ ಸಲ್ಲಿಸಿದರು.ಈ  ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ , ತೋಟಗಾರಿಕಾ ಸಚಿವ ವಿ‌.ಸೋಮಣ್ಣ, ಗೃಹ ಸಚಿವ ಬಸವರಾಜ ಬೊಮ್ಮಯಿ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ‌ ಮತ್ತಿತರರು ಉಪಸ್ಥಿತರಿದ್ದರು.ಸವದಿಗೆ ಸೂಚಕರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರಾದ ಈಶ್ವರಪ್ಪ, ಗೋವಿಂದ್  ಕಾರಜೋಳ, ಆರ್.ಅಸ ಶೋಕ್ ಬಸವರಾಜ್ ಬೊಮ್ಮಯಿ ಸಿ.ಟಿ ರವಿ ಸಿಸಿ ಪಾಟೀಲ್ ಬೆಳ್ಳಿಪ್ರಕಾಶ್  ಜ್ಯೋತಿ ಗಣೇಶ್ ಸೂಚಕರಾಗಿ ಸಹಿಹಾಕಿದರು. ಪರಿಷತ್‌ನ ಉಪ ಚುನಾವಣೆ ಫೆಬ್ರವರಿ 17ರಂದು ನಡೆಯಲಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಹೇಶ್ ಕುಮಟಳ್ಳಿ  ವಿರುದ್ಧ ಸೋಲು ಕಂಡರೂ ಲಕ್ಷ್ಮಣ ಸವದಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದಾರೆ. ಈಗ ಕ್ಷೇತ್ರದ ರಾಜಕೀಯ ಬದಲಾಗಿದ್ದು, ಮಹೇಶ್ ಕುಮಟಳ್ಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ  ಸೇರಿ ಅಥಣಿ ಉಪ ಚುನಾವಣೆಯಲ್ಲಿ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಫೆಬ್ರವರಿ 26ರೊಳಗೆ ಸವದಿ ವಿಧಾನಸಭೆ ಅಥವಾ ಪರಿಷತ್ ಸದಸ್ಯರಾಗುವುದು ಅನಿವಾರ್ಯವಾಗಿದೆ. ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಲಕ್ಷ್ಮಣ ಸವದಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.