ಬಜೆಟ್ ಮೇಲಿನ ಚರ್ಚೆ ತಪ್ಪಿಸಲು ಬಿಜೆಪಿಯಿಂದ ಪ್ರಯತ್ನ: ಸಿದ್ದರಾಮಯ್ಯ ಆರೋಪ

ಬೆಂಗಳೂರು,ಮಾ 11, ಆಡಳಿತ ಪಕ್ಷಕ್ಕೆ ಮೊದಲು ಸದನದಲ್ಲಿ ಮಾತನಾಡಲು ಅವಕಾಶ ಕೊಟ್ಟಿರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರಿಗಳ ಬಗ್ಗೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ಸ್ಪೀಕರ್ ಗೆ ಅಧಿಕಾರವಿದೆ. ಆ ಅಧಿಕಾರ ವ್ಯಾಪ್ತಿಯ ಮೇಲೆಯೇ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಹದಿನೇಳು ಜನರನ್ನು ಅನರ್ಹಗೊಳಿಸಿದ್ದರು. ಈಗ ಸ್ಪೀಕರ್ ಪೀಠದಿಂದ ಅನ್ಯಾಯವಾಗಿದೆ ಎಂದು ನಿನ್ನೆ ಸುಧಾಕರ್ ಹೇಳಿದ್ದು ಆ ಮೂಲಕ ಪೀಠಕ್ಕೆ ಅಗೌರವ ತೋರಿಸಿದ್ದಾರೆ ಎಂದು ಕಿಡಿಕಾರಿದರು.ನಿನ್ನೆ ತಾವು ಸಚಿವ ಸುಧಾಕರ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ಸ್ಪೀಕರ್ ಗೆ ನೊಟೀಸ್ ಕೊಟ್ಟಿದ್ದೆವು.

ಕಲಾಪ ಆರಂಭವಾದ ಬಳಿಕ ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೆವು. ಆದರೆ ಸ್ಪೀಕರ್ ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿದ್ದರು.ಬಳಿಕ ಆಡಳಿತ ಪಕ್ಷದ ಸದಸ್ಯರಿಂದ ಗದ್ದಲದ ಹಿನ್ನೆಲೆ ಸದನ ಮುಂದಕ್ಕೆ ಹೋಯಿತು. ಆದರೆ ಮತ್ತೇ ಕಲಾಪ ಆರಂಭವಾಗುತ್ತಿದ್ದಂತೆ ಅವರಿಗೆ ಮಾತನಾಡಲು ಅವಕಾಶ ಕೊಟ್ಟಿರುವುದು ಸರಿಯಲ್ಲ. ಬಜೆಟ್ ಮೇಲೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ ಸರ್ಕಾರಕ್ಕೆ ಬಜೆಟ್ ಮೇಲೆ ಚರ್ಚೆ ನಡೆಯುವುದು ಬೇಡವಾಗಿದೆ.  ಏಕೆಂದರೆ ಅವರು ಜನವಿರೋಧಿ ಬಜೆಟ್ ಮಂಡಿಸಿದ್ದಾರೆ. ಹಾಗಾಗಿ ಅದರ ಮೇಲೆ ಚರ್ಚೆ ನಡೆಯುವುದು ಅವರಿಗೆ ಬೇಡವಾಗಿದೆ. ಅದರಿಂದ ತಪ್ಪಿಸಿಕೊಳ್ಳಲು ಸರ್ಕಾರ ಪ್ರಯತ್ನ ಪಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.ಮುಖ್ಯಮಂತ್ರಿಗಳು ಮೌನಕ್ಕೆ ಶರಣಾಗಿದ್ದಾರೆ. ಯತ್ನಾಳ್ ವಿಚಾರ ಬಂದಾಗಲೂ ಅವರು ಮೌನವಾಗಿದ್ದರು. ಈಗಲೂ ಮೌನವಾಗಿದ್ದಾರೆ. ಇದು ಅವರ ಅಸಹಾಯಕತೆ ತೋರಿಸುತ್ತದೆ ಎಂದು ಕಿಡಿಕಾರಿದರು.

ಸ್ಪೀಕರ್ ತಮಗಾದರೂ ಮಾತನಾಡಲು ಅವಕಾಶ ಕೊಡಬೇಕಿತ್ತು. ನಾನು ಸ್ಪೀಕರ್ ಬಗ್ಗೆ ಮಾತನಾಡಿಲ್ಲ. ಆಡಳಿತದ ಸದಸ್ಯರಿಗೆ ಮಾತನಾಡುವುದಕ್ಕೆ ಅವಕಾಶ ಕೊಡುವುದಕ್ಕಿಂತ ಮೊದಲ ಆದ್ಯತೆ ಪ್ರತಿಪಕ್ಷಕ್ಕೆ ಕೊಡಬೇಕಿತ್ತು.  ಮೊದಲು ನೋಟಿಸ್ ಕೊಟ್ಟಿರುವುದರಿಂದ ನಾವು. ಹಾಗಾಗಿ ನಮಗೆ ಮೊದಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.ಕೊರೋನಾದಿಂದ ಗುಲ್ಬರ್ಗದಲ್ಲಿ ಶಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ಇಂತಹ ವಿಚಾರಗಳ ಬಗ್ಗೆ ಗಮನ ಹರಿಸಿಲ್ಲ. ಈ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸದನದಲ್ಲಿ ಸರ್ಕಾರ ಸ್ಪಷ್ಟಪಡಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.