ಪೊಲೀಸರಿಗೆ ರಾಖಿ ಕಟ್ಟಿ ಗೌರವ ಸಲ್ಲಿಸಿದ ಬಿಜೆಪಿ ಮಹಿಳಾ ಮೋರ್ಚಾ

ಪೊಲೀಸರಿಗೆ ರಾಖಿ ಕಟ್ಟಿ ಗೌರವ ಸಲ್ಲಿಸಿದ ಬಿಜೆಪಿ ಮಹಿಳಾ ಮೋರ್ಚಾ  BJP Mahila Morcha pays tribute to police by tying Rakhis


ಯಲಬುರ್ಗಾ, ಆ.29: ಸಮಾಜದ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಅರ್ಥಪೂರ್ಣವಾಗಿ ರಕ್ಷಾಬಂಧನ ಆಚರಿಸಲಾಯಿತು.  

ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತೆಯರು ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿ, ಸಿಹಿ ತಿನಿಸಿ ರಕ್ಷಾಬಂಧನದ ಶುಭಾಶಯಗಳನ್ನು ಕೋರಿದರು. ಈ ಮೂಲಕ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂದೇಶ ಸಾರಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಸಂತೋಷಿ ಜೋಶಿ, “ಪೊಲೀಸರು ತಮ್ಮ ಕುಟುಂಬ ಹಾಗೂ ವೈಯಕ್ತಿಕ ಬದುಕನ್ನು ಬದಿಗೊತ್ತಿ ಸಾರ್ವಜನಿಕರ ಸುರಕ್ಷತೆಗಾಗಿ ಸದಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹಬ್ಬ-ಹರಿದಿನಗಳಲ್ಲಿಯೂ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಸೇವೆಯನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ. ರಕ್ಷಾಬಂಧನದ ಪವಿತ್ರ ದಿನದಂದು ಪೊಲೀಸ್ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಅವರೊಂದಿಗೆ ಸಹೋದರತ್ವದ ಬಾಂಧವ್ಯ ಬೆಳೆಸುವುದು ನಮ್ಮ ಉದ್ದೇಶ” ಎಂದರು.  

ಪೊಲೀಸ್ ಠಾಣೆಯ ಎಎಸ್‌ಐ ಕಲ್ಲಪ್ಪ ತಳಕಲ್ ಮಾತನಾಡಿ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಇರುವುದು ಅತ್ಯಂತ ಮುಖ್ಯ. ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಠಾಣೆಗೆ ಆಗಮಿಸಿ ರಾಖಿ ಕಟ್ಟಿರುವುದು ಪೊಲೀಸ್ ಸಿಬ್ಬಂದಿಗೆ ಸಂತೋಷ ಹಾಗೂ ಗೌರವದ ಭಾವನೆ ಮೂಡಿಸಿದೆ. ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.  

ಸಮಾಜದ ರಕ್ಷಣೆಗೆ ಸದಾ ಮುಂಚೂಣಿಯಲ್ಲಿ ನಿಂತಿರುವ ಪೊಲೀಸ್ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದ ಮಹಿಳಾ ಮೋರ್ಚಾದ ಕಾರ್ಯವು ಸಾರ್ವಜನಿಕರ ಗಮನ ಸೆಳೆಯಿತು.  

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಈರಣ್ಣ ಹುಬ್ಬಳ್ಳಿ, ಅಮರೇಶ ಹುಬ್ಬಳ್ಳಿ, ಶಕುಂತಲಮ್ಮ ಮಾಲಿಪಾಟೀಲ, ವಸಂತ ಭಾವಿಮನಿ, ಕಳಕಪ್ಪ ತಳವಾರ, ಬಸವರಾಜ ಗುಳಗುಳಿ, ಹನುಮಂತ ರಾಠೋಡ್, ಡಿ.ಕೆ. ಪರಶುರಾಮ, ಕಲ್ಲಪ್ಪ ಕರಮುಡಿ, ಗೌತಮ್ ಜೋಶಿ ಸೇರಿದಂತೆ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.