ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ರೈಲು

ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ರೈಲು  A train connecting the districts of Vijayanagara, Davanagere, Chitradurga, Chikkamagaluru, and Hassa

ಲೋಕದರ್ಶನ ವರದಿ  

ಹೊಸಪೆಟೆ-ಅರಿಸಿಕೆರೆ ಡೆಮೊ ರೈಲು ಸಂಚಾರ ಆರಂಭ  

ಹೊಸಪೇಟೆ, ಆ. 28: ಅರಿಸಿಕೆರೆ - ಹೊಸಪೆಟೆ ನಡುವೆ ಸಂಚರಿಸಲಿರುವ ನೂತನ ಡೆಮೊ ರೈಲು (ಗಾಡಿ ಸಂಖ್ಯೆ 07343/44) ಶುಕ್ರವಾರ ಬೆಳಗ್ಗೆ 6.30ಕ್ಕೆ ಹೊಸಪೇಟೆ ರೈಲು ನಿಲ್ದಾಣದಿಂದ ಸಂಚಾರ ಆರಂಭಿಸಿತು.  ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ರೈಲಿನ ಎಂಜಿನ್ಗೆ ಪೂಜೆ ಸಲ್ಲಿಸಿ, ಸಿಹಿ ವಿತರಿಸುವ ಮೂಲಕ ಸಂಭ್ರಮಿಸಿದರು.  ನೂತನ ರೈಲು ಮಧ್ಯ ಕರ್ನಾಟಕದ ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸಲಿದ್ದು, ಒಟ್ಟು 29 ನಿಲ್ದಾಣಗಳಲ್ಲಿ ನಿಲುಗಡೆ ಸೌಲಭ್ಯ ಹೊಂದಿದೆ.  

ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಸಾರ್ವಜನಿಕರಿಗೆ ಅನುಕೂಲ  

ಬೆಳಗ್ಗೆ 6.30ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು ಮಧ್ಯಾಹ್ನ 2.30ಕ್ಕೆ ಅರಸೀಕೆರೆಯಿಂದ ಇದೇ ಮಾರ್ಗದಲ್ಲಿ ವಾಪಸ್ ಹೊರಡಲಿದೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯೋಗಿಗಳು ಹಾಗೂ ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರೈಲು ವೇಳಾಪಟ್ಟಿಯನ್ನು ರೂಪಿಸಲಾಗಿದೆ.  

ಅರಸೀಕೆರೆ ರಾಜ್ಯದ ಪ್ರಮುಖ ಜಂಕ್ಷನ್ ಆಗಿರುವುದರಿಂದ ಅಲ್ಲಿಂದ ಬೆಂಗಳೂರು, ಮೈಸೂರು, ಹಾಸನ, ಬಂದರು ನಗರ ಹಾಗೂ ಮಂಗಳೂರು ಭಾಗಗಳಿಗೆ ನೇರ ಸಂಪರ್ಕ ಪಡೆಯಲು ಅವಕಾಶವಿದೆ. ವಿಶೇಷವಾಗಿ ಮಲೆನಾಡು ಪ್ರದೇಶ ಹಾಗೂ ವಿಜಯನಗರ ಜಿಲ್ಲೆಯ ನಡುವೆ ರೈಲು ಸಂಪರ್ಕ ಕಲ್ಪಿಸಿರುವುದರಿಂದ ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ನೀರೀಕ್ಷಿಸಲಾಗಿದೆ.  

ರೈಲು ಸಂಚಾರ ವಿಸ್ತರಣೆಗೆ ಒತ್ತಾಯ  

ಹೊಸ ರೈಲು ಸಂಚಾರ ಆರಂಭವಾದ ಮೊದಲ ದಿನವೇ ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನೂರಾರು ಜನರು ರೈಲನ್ನು ಸಂಭ್ರಮದಿಂದ ಸ್ವಾಗತಿಸಿ, ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.  

ಪ್ರಸ್ತುತ ಈ ವಿಶೇಷ ರೈಲು ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನ ಸಂಚರಿಸಲಿದೆ. ರೈಲು ಸಂಚಾರವನ್ನು ಕಾಯಂಗೊಳಿಸಿ, ಮುಂದಿನ ದಿನಗಳಲ್ಲಿ ಮೈಸೂರು ಅಥವಾ ಮಂಗಳೂರುವರೆಗೆ ವಿಸ್ತರಿಸಬೇಕು ಎಂದು ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಅಧ್ಯಕ್ಷ ವೈ. ಯಮುನೇಶ್ ಹಾಗೂ ಕಾರ್ಯದರ್ಶಿ ಮಹೇಶ್ ಕುಡುತಿನಿ ಒತ್ತಾಯಿಸಿದರು.  

ರೈಲು ಸೇವೆ ಆರಂಭವಾಗಿರುವುದರಿಂದ ಈ ಭಾಗದ ಜನರಿಗೆ ದೀರ್ಘಕಾಲದ ಪ್ರಯಾಣಕ್ಕೆ ಪರ್ಯಾಯ ಸೌಲಭ್ಯ ದೊರೆತಿದ್ದು, ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವೈದ್ಯಕೀಯ ಸೇವೆಗಾಗಿ ಸಂಚರಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.  

ಈ ಸಂದರ್ಭದಲ್ಲಿ ಮುಖಂಡರಾದ ಯು. ಆಂಜನೇಯಲು, ದೀಪಕ್ ಉಳ್ಳಿ, ಕಲ್ಲೇಶ್, ನಜೀರ್ಸಾಬ್, ತಿಪ್ಪೇಸ್ವಾಮಿ, ದೇವರಡ್ಡಿ, ವರುಣ್, ರಾಮಮೂರ್ತಿ, ಅರವಿಂದ ಜಾಲಿ, ಟೈಲರ್ ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.