ಮೈಸೂರು, ಅ 11: ಐಟಿ, ಇಡಿ, ಸಿಬಿಐ ಎಲ್ಲಾ ತನಿಖಾ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದು, ತಮ್ಮ ಎದುರಾಳಿಗಳನ್ನು ಹೆಣಿಯಲು ದುರ್ಬಬಳಕೆ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆರೋಪಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ನಿವಾಸದ ಮೇಲೆ ಐಟಿ ದಾಳಿ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯವಂತರೇ? ಅವರಲ್ಲಿ ಯಾರೂ ತಪ್ಪೇ ಮಾಡಿಲ್ಲವೇ?ಎಂದು ಪ್ರಶ್ನಿಸಿದರು.
ಪರಮೇಶ್ವರ್ ತಂದೆ ವೈದ್ಯಕೀಯ ಕಾಲೇಜು ಸ್ಥಾಪಿಸಿ ಅದನ್ನು ಬೆಳೆಸಿದ್ದಾರೆ. ಅವರೇನೂ ನಿನ್ನೆ ಮೊನ್ನೆ ಶ್ರೀಮಂತರಾದವಲ್ಲ. 50 ವರ್ಷದ ಹಿಂದೆಯೇ ಅವರು ತಂದೆ ಮಾಡಿದ ಆಸ್ತಿ ಅದು. ಹೊಸದಾಗಿ ಪ್ರವೇಶ ಕಲ್ಪಿಸಿರುವ ವಿಚಾರದಲ್ಲಿ ಒಂದಿಷ್ಟು ವ್ಯತ್ಯಾಸವಾಗಿರಬಹುದು. ಏನೇ ಆದರೂ ಪರಮೇಶ್ವರ್ ಏಕಾ ಏಕೀ 5ಸಾವಿರ ಕೋಟಿ ರೂ. ಆಸ್ತಿ ಒಡೆಯರಾಗಿಲ್ಲ ಎಂದರು.
ತಾವೇನು ಅಧಿಕಾರ ಕೊಡಿ ಎಂದು ಕಾಂಗ್ರೆಸ್ ಮನೆಗೆ ಹೋಗಿರಲಿಲ್ಲ. ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಅವರೇ ನಮ್ಮ ಮನೆಗೆ ಬಂದು, ನನ್ನ ಕೈ ಹಿಡಿದುಕೊಂಡು ಬಲವಂತವಾಗಿ ನಮಗೆ ಅಧಿಕಾರ ಕೊಟ್ಟರು. ನಮಗೆ ಅಧಿಕಾರ ಬೇಡ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದಿದ್ದೆ. ಆದರೂ, ಕೈ ಹಿಡಿದು ಕೊಂಡು ನನ್ನನ್ನು ಒಪ್ಪಿಸಿದರು ಎಂದರು.
ಮೈತ್ರಿ ಸರಕಾರ ಅಧಿಕಾರದಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಯಾವುದೇ ಕಾರ್ಯಕ್ರಮ ನಿಲ್ಲಬಾರದು ಎಂದು ಷರತ್ತು ಹಾಕಿದರು. ಹೀಗಾಗಿ ಆ ಯೋಜನೆಗಳನ್ನು ಮುಂದುವರಿಸಿ, ಅದಕ್ಕೆ ಹಣ ಹೊಂದಿಸಿದ್ದೇವು. ನಂತರ ಕೊಡಗಿನಲ್ಲಿ ಜಲಪ್ರಳಯವಾದಾಗ ಹೆಚ್ ಡಿ ಕುಮಾರಸ್ವಾಮಿ ಅನುದಾನ ಬಿಡುಗಡೆ ಮಾಡಿದರು. ಆದರೆ, ಕೇಂದ್ರ ಸರಕಾರ ತಕ್ಷಣ ಒಂದು ರೂಪಾಯಿ ನೀಡಲಿಲ್ಲ. ಎಲ್ಲವನ್ನೂ ಕುಮಾರಸ್ವಾಮಿ ಸರಿದೂಗಿಸಿದರು ಎಂದು ಮಗನ ಆಡಳಿತವನ್ನು ಅವರು ಪ್ರಶಂಸಿದರು.
ಮೊಮ್ಮಗ ಪ್ರಜ್ವಲ್ ಚುನಾವಣೆಗೆ ಬರುವುದಿಲ್ಲ. ಅವನು ಸಂಸದನಾಗಿದ್ದಾನೆ. ಈ ಬಾರಿ ವಿಧಾನಸಭೆ ಉಪಚುನಾವಣೆಯಲ್ಲಿ ನಿಖಿಲ್ ಕೂಡ ಚುನಾವಣೆಗೆ ನಿಲ್ಲುವುದಿಲ್ಲ. ಸ್ಥಳೀಯರಿಗೆ ಟಿಕೆಟ್ ಕೊಡುತ್ತೇವೆ. ಆದರೆ, ಚುನಾವಣೆ ನಡೆಯುವುದು ಅನುಮಾನವಿದೆ ಎಂದರು.
ಅನರ್ಹ ಶಾಸಕರ ವಿರುದ್ಧ ಸುಪ್ರೀಂ ಕೋರ್ಟ್ ತೀಪು ನೀಡಿದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಸರಕಾರದ ವಿರುದ್ಧ ತಮ್ಮ ಹೋರಾಟ ನಿಲ್ಲುವುದಿಲ್ಲ. ಅಲ್ಲದೇ, ವ್ಯಕ್ತಿ ದ್ವೇಷದಿಂದ ಯಾರ ವಿರುದ್ದವೂ ಹೋರಾಟ ಮಾಡುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಎಷ್ಟೇ ಜೋರಾಗಿ ಮಾತಾಡಿದರೂ, ತಾವು ದ್ವೇಷದಿಂದ ಮಾತನಾಡುವುದಿಲ್ಲ ಎಂದರು.
ಕಲಾಪಗಳಿಗೆ ಮಾಧ್ಯಮ ಪ್ರವೇಶ ನಿಷೇಧ ಕುರಿತು ಪ್ರತಿಕ್ರಿಯಿಸಿದ ಅವರು, ಸ್ಪೀಕರ್ ವಿಶ್ವೇಶ್ವರಯ್ಯ ಕಾಗೇರಿ ಅವರಿಗೆ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದೇನೆ. ಇದು ಅತ್ಯಂತ ದೊಡ್ಡ ದುರ್ಘಟನೆ ಎಂದು ಕಿಡಿಕಾರಿದರು.