ನವದೆಹಲಿ, ಜ 31 : ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಿಸಿದ್ದು, ಉಪ ಚುನಾವಣೆಯಲ್ಲಿ ಜಯ ಸಾಧಿಸಿದ ಅರ್ಹ ಶಾಸಕರನ್ನು ಸಚಿವ ಸಂಪುಟ ಸೇರ್ಪಡೆಗೆ ಬಿಜೆಪಿ ವರಿಷ್ಠರು ಒಪ್ಪಿಗೆ ಸೂಚಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದು ಉಪಚುನಾವಣೆಯಲ್ಲಿ ಗೆದ್ದ ಹತ್ತುಮಂದಿಗೆ ಸಂಪುಟದಲ್ಲಿ ಸ್ಥಾನ ನೀಡಲು ವರಿಷ್ಠರು ಸಮ್ಮತಿಸಿದ್ದು, ಉಳಿದಂತೆ ಮೂಲ ಬಿಜೆಪಿ ಶಾಸಕರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ. ಈ ಬೆಳವಣಿಗೆಯ ನಂತರ ಚುನಾವಣೆಯಲ್ಲಿ ಪರಾಭವಗೊಂಡಿರುವವರ ಆಸೆ ಭಗ್ನವಾಗುವ ಸಾಧ್ಯತೆಗಳು ದಟ್ಟವಾಗಿವೆ. ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ರಮೇಶ್ ಜಾರಕಿಹೊಳಿ, ಶ್ರೀರಾಮುಲು ಅವರ ಆಸೆ ಸಹ ಕಮರಿದೆ. ಏಕೆಂದರೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಬೇಡಿ ಎಂದು ವರಿಷ್ಠರು ಸ್ಪಷ್ಟವಾಗಿ ಹೇಳಿದ್ದಾರೆ.
ಮಂತ್ರಿ ಸ್ಥಾನಕ್ಕಾಗಿ ಎಲ್ಲೆಡೆಯಿಂದ ತೀವ್ರ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವವರನ್ನು ಆಯ್ಕೆ ಮಾಡಿಕೊಳ್ಳುವುದು ಇದೀಗ ಯಡಿಯೂರಪ್ಪ ಅವರಿಗೆ ಬಹುದೊಡ್ಡ ಸವಾಲಾಗಿದೆ. ಹನ್ನೆರಡು ಮಂದಿ ಚುನಾವಣೆಯಲ್ಲಿ ಗೆದ್ದಿದ್ದು, ಇಬ್ಬರನ್ನು ಕೈಬಿಡಬೇಕಾಗಿದೆ. ಸೋಮವಾರದ ಒಳಗಾಗಿ ತಮ್ಮ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಇದಕ್ಕಾಗಿ ಶನಿವಾರ ಮತ್ತು ಭಾನುವಾರ ಯಡಿಯೂರಪ್ಪ ವೇದಿಕೆ ಅಣಿಗೊಳಿಸಲು ಮುಂದಾಗಿದ್ದಾರೆ.
ಯಡಿಯೂರಪ್ಪ ಅವರು ಸಂಸತ್ ಭವನದ ಕೊಠಡಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸುಮಾರು ಆರ್ಧ ತಾಸು ಮಾತುಕತೆ ನಡೆಸಿದರು ಎಂದು ಮೂಲಗಳು ಹೇಳಿವೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಸಿದ್ದಪಡಿಸಿಕೊಂಡು ಹೋಗಿದ್ದ ಪಟ್ಟಿಗೆ ಅಮಿತ್ ಶಾ, ಜೆ.ಪಿ. ನಡ್ಡಾ ಬಹುತೇಕ ಒಪ್ಪಿಗೆ ಸೂಚಿಸಿ , ಕೆಲ ಸಲಹೆ, ಸೂಚನೆ ನೀಡಿದ್ದಾರೆ. ವಿಸ್ತರಣೆ ಸಂದರ್ಭದಲ್ಲಿ ಮೂಲ ಬಿಜೆಪಿಯವರನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ಉಪ ಚುನಾವಣೆಯಲ್ಲಿ ಗೆದ್ದಿರುವ ಶಾಸಕರ ಪೈಕಿ ೧೦ ಶಾಸಕರಿಗೆ ಮಂತ್ರಿ ಭಾಗ್ಯ. ಇನ್ನುಳಿದಂತೆ ಮೂವರು ಮೂಲ ಬಿಜೆಪಿ ಶಾಸಕರಿಗೂ ಸಚಿವ ಸ್ಥಾನ ಸಿಗಲಿದೆ. ಮೂಲ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಬಿಜೆಪಿಯ ಅರವಿಂದ್ ಲಿಂಬಾವಳಿ, ಉಮೇಶ್ ಕತ್ತಿ, ಎಸ್ ಎ ರಾಮದಾಸ್, ಎಸ್.ಎ. ಅಂಗಾರ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಈ ಪೈಕಿ ಅಂಗಾರ ಹೊರತುಪಡಿಸಿ ಉಳಿದಿವರಿಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಉಳಿದ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುತ್ತಿರುವುದು ಇದೀಗ ತೀವ್ರ ತಲೆ ನೋವು ತಂದೊಡ್ಡಿದೆ.
ವರಿಷ್ಠರ ಭೇಟಿ ನಂತರ ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾತನಾಡಿದ ಯಡಿಯೂರಪ್ಪ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಕೇಂದ್ರೀಯ ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ. ಬೆಂಗಳೂರಿಗೆ ತೆರಳಿದ ನಂತರ ಚರ್ಚೆ ನಡೆಸಿ ಮಂತ್ರಿ ಮಂಡಲ ವಿಸ್ತರಣೆಗೆ ದಿನಾಂಕ ಗೊತ್ತುಪಡಿಸುವುದಾಗಿ ಹೇಳಿದರು.
ಸಚಿವ ಸಂಪುಟದಲ್ಲಿರುವ ಮೂವರು ಉಪಮುಖ್ಯಮಂತ್ರಿಗಳಿದ್ದು, ಇವರು ಮುಂದುವರಿಯಲಿದ್ದಾರೆ. ವಿಸ್ತರಣೆಯಲ್ಲಿ ಹೊಸದಾಗಿ ಡಿಸಿಎಂ ಹುದ್ದೆ ಸೃಷ್ಟಿಸುವುದಿಲ್ಲ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು.