ನವದೆಹಲಿ, ಫೆ 3, ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆಯನ್ನು ಆರಂಭಿಸಲು ವಿವಾದಾತ್ಮಕ ಸದಸ್ಯ ಪರ್ವೇಶ್ ಸಾಹೇಬ್ ವರ್ಮಾ ಅವರಿಗೆ ಬಿಜೆಪಿ ಅವಕಾಶ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್, ಡಿಎಂಕೆ, ಎಐಎಂಐಎಂ ಮತ್ತು ಆರ್‍ಎಸ್‍ಪಿ ಸೇರಿದಂತೆ ಇತರ ಪಕ್ಷಗಳ ಸದಸ್ಯರು ಸೋಮವಾರ ಲೋಕಸಭೆಯಲ್ಲಿ ಸಭಾತ್ಯಾಗ ನಡೆಸಿದ್ದಾರೆ. ಚರ್ಚೆಯನ್ನು ಆರಂಭಿಸಲು ಸ್ಪೀಕರ್ ಓಂ ಬಿರ್ಲಾ ಅವರು, ವರ್ಮಾ ಅವರಿಗೆ ಸೂಚಿಸಿದ ತಕ್ಷಣವೇ, ಕಾಂಗ್ರೆಸ್ ಸಭಾ ನಾಯಕ ಅಧಿರ್ ರಂಜನ್ ಚೌಧರಿ ಮತ್ತು ಇತರ ವಿರೋಧ ಪಕ್ಷದ ಸದಸ್ಯರು ವರ್ಮಾ ಅವರು ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಆಕ್ಷೇಪಿಸಿದರು.
ಗದ್ದಲದಲ್ಲಿ ಏನೂ ಕೇಳಲಾರದ ಸಂದರ್ಭದಲ್ಲೇ ಚೌಧರಿ ಮತ್ತು ಕಾಂಗ್ರೆಸ್ ನ ಮತ್ತೊಬ್ಬ ಗೌರವ್ ಗೊಗೊಯ್, ಅಸದುದ್ದೀನ್ ಒವೈಸಿ (ಎಐಎಂಐಎಂ) ಮತ್ತು ಟಿ.ಆರ್. ಬಾಲು, ಎ ರಾಜಾ (ಡಿಎಂಕೆ) ಸೇರಿದಂತೆ ಪ್ರತಿಪಕ್ಷದ ಸದಸ್ಯರು ವರ್ಮಾ ಅವರು ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪಶ್ಚಿಮ ದೆಹಲಿ ಸಂಸದರಾದ ವರ್ಮಾ ದ್ವೇಷದ ಭಾಷಣ ಮಾಡಿದ್ದಾರೆ ಎನ್ನಲಾಗಿದೆ.
ಸರ್ಕಾರಿ ವಿರೋಧಿ ಘೋಷಣೆಗಳನ್ನು ಪ್ರತಿಪಕ್ಷಗಳ ಸದಸ್ಯರು ಕೂಗುತ್ತಿದ್ದಂತೆ ಬಿರ್ಲಾ ಅವರು, ‘ಸದನದಲ್ಲಿ ಹಿಂದಿನದನ್ನು ಪುನರಾವರ್ತಿಸಬಾರದು. ಸದನದ ಹೊರಗೆ ನಡೆದದ್ದನ್ನು ಪ್ರಸ್ತಾಪಿಸಿ ಕಲಾಪಗಳಿಗೆ ಅಡ್ಡಿ ಪಡಿಸಬಾರದು. ಗಲಾಟೆ ಮಾಡುವ ಪರಂಪರೆ ಮುಂದುವರಿಸಬಾರದು’ ಎಂದು ಮನವಿ ಮಾಡಿದರು. ಗದ್ದಲದ ನಡುವೆ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ವರ್ಮಾ ಮಾತನಾಡಿ, ವಿರೋಧ ಪಕ್ಷಗಳ ನಾಯಕರು ಪ್ರಧಾನಿ ಮೋದಿ ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.