ಹಕ್ಕಿ ಜ್ವರ: ವರದಿಯ ನಿರೀಕ್ಷೆಯಲ್ಲಿ ಪಶುಸಂಗೋಪನಾ ಇಲಾಖೆ

ಮೈಸೂರು, ಮಾ 11,ಕಳೆದ ತಿಂಗಳು ನೆರೆಯ ಕೇರಳದಲ್ಲಿ ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ವಲಸೆ ಹಕ್ಕಿಗಳು ಮೃತಪಟ್ಟಿರುವ ಸುದ್ದಿಯ ಬೆನ್ನಲ್ಲೇ ನಗರದ ಕೆಲವೆಡೆ ಹಕ್ಕಿಗಳು ಅಸುನೀಗಿದ್ದವು. ಹೀಗಾಗಿ ಹಕ್ಕಿ ಜ್ವರದ ಕುರಿತು ಪ್ರಯೋಗಾಲಯದ ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಮೈಸೂರು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಅಜಿತ್ ಕುಮಾರ್ ತಿಳಿಸಿದ್ದಾರೆ.   ಕಳೆದ ತಿಂಗಳ 15 ರಿಂದ 22ರೊಳಗೆ ಕೇರಳದಲ್ಲಿ ಹಕ್ಕಿಗಳು, ಕೋಳಿಗಳು ಮೃತಪಟ್ಟಿದ್ದು, ಸಾವಿಗೆ ಹಕ್ಕಿ ಜ್ವರ ಕಾರಣ ಎಂಬ ಶಂಕೆ ವ್ಯಕ್ತವಾಗಿತ್ತು. ಬಳಿಕ ಹೆಬ್ಬಾಳ ಹಾಗೂ ಚಾಮುಂಡಿಪುರಂನಲ್ಲಿ ಬಾತುಕೋಳಿಗಳು ಸಾವನ್ನಪ್ಪಿದ್ದವು.  ಮೃತ ಹಕ್ಕಿಗಳ ರಕ್ತದ ಮಾದರಿಯನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯಕೀಯ ಜೈವಿಕ ಕೇಂದ್ರದ ಪರಿಶೀಲನೆಗೆ ಕಳುಹಿಸಿದ್ದು, ವರದಿಗಾಗಿ ಕಾದಿದ್ದೇವೆ ಎಂದು ತಿಳಿಸಿದ್ದಾರೆ.  ಒಂದು ವೇಳೆ ವರದಿಯು ಧನಾತ್ಮಕವಾಗಿದ್ದಲ್ಲಿ ಮತ್ತೊಂದು ಸುತ್ತಿನ ಪರೀಕ್ಷೆಗಾಗಿ ಬೋಪಾಲ್ ನ ಪ್ರಯೋಗಾಲಯಕ್ಕೂ ಕಳುಹಿಸಲಾಗುವುದು ಎಂದಿದ್ದಾರೆ.  ಕಳೆದ ತಿಂಗಳು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿಯೂ ಹಕ್ಕಿಗಳು ಮೃತಪಟ್ಟಿರುವ ವರದಿಯಾಗಿದೆ.   ಹಕ್ಕಿಜ್ವರದ ಶಂಕೆಯು ಕೋಳಿ ಸಾಕಣೆ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಆದಾಗ್ಯೂ ಮಾಲೀಕರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿರುವುದರಿಂದ ಕೋಳಿಗಳು ಸುರಕ್ಷಿತವಾಗಿವೆ ಎಂದು ಮಾಹಿತಿ ನೀಡಿದ್ದಾರೆ.