ಕೊರೊನಾ ಭೀತಿ : ಬಯೋಮೆಟ್ರಿಕ್ ರದ್ದು

ಇಂಫಾಲ, ಮಾ 7, ಕೊರೊನ ವೈರಾಣು ಸೋಂಕು ಹರಡದಂತೆ ತಡೆಯಲು ಮುಂಜಾಗರೂಕತಾ ಕ್ರಮವಾಗಿ ತಕ್ಷಣದಿಂದ ಅನ್ವಯವಾಗುವಂತೆ ಸರಕಾರಿ ಕಚೇರಿಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಒಂದು ತಿಂಗಳ ಮಟ್ಟಿಗೆ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಬೀರೇನ್ ಸಿಂಗ್ ಹೇಳಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಕೊರೊನ ವೈರಸ್ ವಿರುದ್ಧ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ ಎಂದರು.  ರಾಜ್ಯದ ಆರೋಗ್ಯ ಇಲಾಖೆ ಜನವರಿ 18 ರಿಂದಲೇ ಸೂಕ್ತ ಕ್ರಮ ಕೈಗೊಂಡಿರುವುದರಿಂದ ರಾಜ್ಯದಲ್ಲಿ ಇದುವರೆಗೆ ಕೊರೊನ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದರು. ಇಂಫಾಲದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದ್ದು  ರಾಜ್ಯವನ್ನು ಪ್ರವೇಶಿಸುವ ಸ್ಥಳಗಳಲ್ಲೂ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.   ರಾಜ್ಯಕ್ಕೆ ಭೇಟಿ ನೀಡಬಯಸುವವರು ಭಾರತ-ಮ್ಯಾನ್ಮಾರ್ ಗಡಿ ಸೇರಿದಂತೆ ರಾಜ್ಯವನ್ನು ಪ್ರವೇಶಿಸುವ ಸ್ಥಳಗಳಲ್ಲಿ ನೀಡುವ ಅರ್ಜಿಯನ್ನು ಭರ್ತಿ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.