ಬಿಎಚ್‍ಇಎಲ್ ಗೆ ನೇಪಾಳದ 40 ಮೆವ್ಯಾ ಜಲವಿದ್ಯುತ್ ಯೋಜನೆ ಗುತ್ತಿಗೆ

ಮುಂಬೈ, ಫೆ 3, ನೇಪಾಳದಲ್ಲಿ 40 ಮೆಗಾವ್ಯಾಟ್ ಸಾಮಥ್ರ್ಯದ ರಾಹುಘಾಟ್ ಜಲವಿದ್ಯುತ್ ಯೋಜನೆಯ ಎಲೆಕ್ಟ್ರೋಮೆಕ್ಯಾನಿಕಲ್ (ಇಎಂ) ಕೆಲಸಗಳ ಗುತ್ತಿಗೆಯನ್ನು ಸಾರ್ವಜನಿಕ ವಲಯದ, ಬೆಂಗಳೂರು ಮೂಲದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್(ಬಿಎಚ್‍ಇಎಲ್) ಪಡೆದಿದೆ.  ಇಡೀ ನೇಪಾಳಕ್ಕೆ ವಿದ್ಯುತ್ ಪೂರೈಸುತ್ತಿರುವ ನೇಪಾಳ ವಿದ್ಯುತ್ ಪ್ರಾಧಿಕಾರ(ಎನ್‍ಇಎ) ಒಡೆತನದ ರಘುಗಂಗ ಜಲವಿದ್ಯುತ್ ಸಂಸ್ಥೆ (ಆರ್‍ಜಿಹೆಚ್‍ಪಿಎಲ್), ಬಿಎಚ್‍ಇಎಲ್‍ಗೆ ಈ ಗುತ್ತಿಗೆಯನ್ನು ನೀಡಿದೆ.  

ಈ ಯೋಜನೆಗೆ ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾ ಮೃದು ಸಾಲದ ರೂಪದಲ್ಲಿ ನೆರವು ನೀಡುತ್ತಿದೆ. ಜೊತೆಗೆ ಎನ್‍ಇಎ ಮತ್ತು ನೇಪಾಳ ಸರ್ಕಾರ ಸಹ ಧನಸಹಾಯ ನೀಡಲಿದೆ. ವಾಪ್ಕೋಸ್ ಇಂಡಿಯಾ ಸಂಸ್ಥೆ ಯೋಜನಾ ಸಲಹೆಗಾರ ಸಂಸ್ಥೆಯಾಗಿದೆ ಎಂದು ಮುಂಬೈ ಷೇರು ಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಿಎಚ್‍ಇಎಲ್ ತಿಳಿಸಿದೆ.  

ನೇಪಾಳದ ಮ್ಯಾಗ್ಡಿ ಜಿಲ್ಲೆಯ ರಘುಗಂಗ ಪುರಸಭೆ ವ್ಯಾಪ್ತಿಯಲ್ಲಿ ರಾಹುಘಾಟ್ ಜಲವಿದ್ಯುತ್ ಸ್ಥಾವರದ ಗುತ್ತಿಗೆಯು, ಎರಡು ಟರ್ಬೈನ್‍ಗಳ (ತಲಾ 20 ಮೆಗಾವ್ಯಾಟ್) ಪೂರೈಕೆ ಸೇರಿದಂತೆ ಅವುಗಳ ಎಲೆಕ್ಟ್ರೋ-ಮೆಕ್ಯಾನಿಕಲ್ ಪ್ಯಾಕೇಜ್‍ನ ವಿನ್ಯಾಸ, ಎಂಜಿನಿಯರಿಂಗ್, ಉತ್ಪಾದನೆ, ಪೂರೈಕೆ, ನಿರ್ಮಾಣವನ್ನು ಒಳಗೊಂಡಿದೆ. ಸ್ಥಾವರದ ಉಪಕರಣಗಳನ್ನು ಭೋಪಾಲ್, ಝಾನ್ಸಿ, ರುದ್ರಪುರ ಮತ್ತು ಬೆಂಗಳೂರಿನಲ್ಲಿರುವ ಬಿಎಚ್‍ಇಎಲ್ ಸ್ಥಾವರಗಳಲ್ಲಿ ತಯಾರಿಸಿ ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.