ಮಳೆ ಅವಘಡ ತಡೆಗೆ ತಕ್ಷಣವೇ ಬಿಬಿಎಂಪಿ ಮುಂದಾಗಲಿ: ಎಎಪಿ

ಬೆಂಗಳೂರು, ಏ.10, ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಘಡ ಸಂಭವಿಸುವ ಮೊದಲೇ ಬಿಬಿಎಂಪಿ ಎಚ್ಚೆತ್ತುಕೊಂಡು ಎಲ್ಲಾ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಎಎಪಿ ಒತ್ತಾಯಿಸಿದೆ.ಈ ಬಗ್ಗೆ ಹೇಳಿಕೆ ಬಿಡುಗಡೆಗೊಳಿಸಿರು ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಕಳೆದ  ಸೋಮವಾರದಿಂದ ಪ್ರತಿದಿನವೂ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಲೆ ಇದೆ. ಈ ಅಲ್ಪ ಮಳೆಗೆ  ಬೆಂಗಳೂರಿನ ರಸ್ತೆಗಳು ಹಾಗೂ ಫೈ ಓವರ್‌ಗಳು ನೀರಿನಿಂದ ತುಂಬಿ ಹೋಗಿದ್ದವು. ನಗರದಲ್ಲಿ  ಜನರೇ ಇಲ್ಲದ ಪರಿಣಾಮ ಯಾವುದೇ ಸಮಸ್ಯೆ ಉಂಟಾಗಲಿಲ್ಲ, ಆದರೆ ಇನ್ನೇನು ವಾಡಿಕೆಯ ಮಳೆಗಾಲ  ಪ್ರಾರಂಭವಾಗಲಿದೆ. ಯುದ್ದ ಕಾಲದಲ್ಲಿ ಮತ್ತೆ ಶಸ್ತ್ರಾಭ್ಯಾಸ ಮಾಡುವುದನ್ನು ಬಿಟ್ಟು  ಒಂದಷ್ಟು ಕ್ರಮಗಳನ್ನು ಈಗಲೇ ತೆಗೆದುಕೊಂಡರೆ  ಒಳಿತಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಕೊರೋನಾ  ರಾಜ್ಯಕ್ಕೆ ಕಾಲಿಡುವುದಕ್ಕಿಂತ ಮುಂಚಿತವಾಗಿ ಬೆಂಗಳೂರಿನಲ್ಲಿ ಸುಮಾರು 52  ಪ್ರದೇಶಗಳನ್ನು ಗಂಭೀರ ಕಾಲರಾ ಪೀಡಿತ ಪ್ರದೇಶಗಳು ಎಂದು ಗುರುತಿಸಲಾಗಿತ್ತು. ಕೊರೊನಾ  ಗಲಾಟೆಯಲ್ಲಿ ಇದು ತೆರೆಮರೆಗೆ ಸರಿದಿದ್ದು ಸಹಜ. ಮಳೆ ನೀರಿನಿಂದ ಉಂಟಾಗುವ ಅವಘಡ ಗಂಭೀರ  ಸ್ವರೂಪ ಪಡೆದರೆ ಹರಡಬಹುದಾದ ಸಾಂಕ್ರಮಿಕ ರೋಗಗಳಿಂದ ಜನ ಇನ್ನಷ್ಟು ಬಳಲಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಕಳೆದ  ವರ್ಷ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಸುಮಾರು 1,380 ಕೋಟಿ ರೂ. ಯಷ್ಟು  ಹಣ ಬೆಂಗಳೂರು ನಗರ ಒಂದರಲ್ಲೆ ನಷ್ಟ ಉಂಟಾಗಿತ್ತು. ಇಷ್ಟಾದರೂ ಎಚ್ಚೆತ್ತು ಕೊಳ್ಳದ  ಬಿಬಿಎಂಪಿ ಆಡಳಿತ ಪಕ್ಷ ತಣ್ಣಗೆ ಎಸಿ ಕೊಠಡಿಯಲ್ಲಿ ಕುಳಿತುಕೊಂಡಿತ್ತು.
 ನಿನ್ನೆ  ಸುರಿದ ಸಣ್ಣ ಪ್ರಮಾಣದ ಮಳೆಯಿಂದಲೇ ಬೆಂಗಳೂರಿನ ಹಲವು ಭಾಗಗಳ ರಸ್ತೆಗಳು, ಚರಂಡಿಗಳಲ್ಲಿ  ನೀರು ತುಂಬಿ ರಸ್ತೆಯ ಮೇಲಿದ್ದ ಒಂದೆರಡು ವಾಹನಗಳೇ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ  ನಿರ್ಮಾಣವಾಗಿತ್ತು. ಅಕಸ್ಮಾತ್ ಮನೆಗಳಿಗೆ ನೀರು ನುಗ್ಗಿದರೆ ಜನ ಎಲ್ಲಿಗೆ ಹೋಗಬೇಕು?  ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಕೊರೋನಾ ಗಂಭೀರ  ಸ್ವರೂಪ ಪಡೆಯುತ್ತಿರುವ ಈ ಹೊತ್ತಿನಲ್ಲಿ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ಹರಿದರೆ  ಅಲ್ಲಿನ ನಿವಾಸಿಗಳ ಗತಿ ಏನು ಹಾಗೂ ಅವರಿಗೆ ಆಹಾರ, ವಸತಿ ಹೀಗೆ ಮೂಲ ಸೌಕರ್ಯಗಳ  ಪೂರೈಕೆಗೆ ಹೆಣಗಾಡಬೇಕಾಗುತ್ತದೆ.  ಈ ಸಂದಿಗ್ಧ ಪರಿಸ್ಥಿತಿಗೆ, ಆತಂಕಕ್ಕೆ ಸರ್ಕಾರ ಹಾಗೂ  ಬಿಬಿಎಂಪಿಯ ಬೇಜವಾಬ್ದಾರಿತನವೇ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹೆಚ್ಚಿನ  ಜನಸಂದಣಿ ಇರದ ಕಾರಣ, ಈ ಪರಿಸ್ಥಿತಿಯ ಲಾಭ ಪಡೆದು ಇನ್ನು ಮುಂದೆ ಸುರಿಯುವ ಮಳೆಗೆ  ಬೆಂಗಳೂರು ಮತ್ತಷ್ಟು ತತ್ತರಿಸುವುದನ್ನು ಕಡಿಮೆ ಮಾಡಲು ಮುಂದಾಗಬೇಕು. ಇಂತಹ ಪರಿಸ್ಥಿತಿ  ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ ಅನಾಹುತವನ್ನು ನಿಯಂತ್ರಿಸಲು ಮುಂದಾಗಬೇಕು.ಕೊರೊನಾ  ಕಾರಣವನ್ನು ಮುಂದಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಇದ್ದರೆ,  ಮುಂದಾಗುವ ಅವಘಡಗಳಿಗೆ ಬಿಬಿಎಂಪಿಯ ಜವಾಬ್ದಾರಿ ಹೊತ್ತಿರುವ ಮೇಯರ್ ಮತ್ತು ಆಯುಕ್ತರನ್ನೆ  ನೇರ ಹೊಣೆ ಮಾಡಬೇಕಾಗುತ್ತದೆ. ಭಾರಿ  ಮಳೆ ಬಂದರೆ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಕ್ಷಣವೇ ಬಿಬಿಎಂಪಿಯು  ಯೋಜನೆಯೊಂದನ್ನು ರೂಪಿಸಿ ಕಾರ್ಯನಿರತವಾಗಬೇಕು.  ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು  ಕ್ಷಿಪ್ರ-ಕಾರ್ಯಪಡೆ, ಮಳೆ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಅಗತ್ಯ  ಮತ್ತು ಅವಶ್ಯಕ  ಸಲಕರಣೆಗಳು ಮತ್ತು ನುರಿತ ಸಿಬ್ಬಂದಿಗಳ ವ್ಯವಸ್ಥೆಯನ್ನು  ಮಾಡಬೇಕು.  ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಸ್ಪಂದಿಸಲು ಶಾಶ್ವತ ಸಹಾಯವಾಣಿ ಸ್ಥಾಪನೆ ಆಗಬೇಕು.  ಭಾರೀ ಮಳೆಯಿಂದ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವ  ಕೆಲವು ಪ್ರದೇಶಗಳನ್ನಾದರೂ  ಗುರುತಿಸಿ ಅಲ್ಲಿ ವಿಶೇಷ ನಿಗಾ ಇರಿಸಬೇಕು ಎಂದು ಜೈನ್ ಒತ್ತಾಯಿಸಿದ್ದಾರೆ.