ಅಯೋಧ್ಯಾ ತೀಪು ಹಿನ್ನೆಲೆ; ಉತ್ತರ ಪ್ರದೇಶದಲ್ಲಿ ಪೊಲೀಸ್ ಸರ್ಪಗಾವಲು; 40 ಕೇಂದ್ರೀಯ ಪಡೆಗಳ ನಿಯೋಜನೆ

ಲಕ್ನೋ, ನವೆಂಬರ್ 6:     ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದ ತೀರ್ಪನ್ನು ಸುಪ್ರೀಂಕೋರ್ಟ್ ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಉತ್ತರ ಪ್ರದೇಶ ಸರ್ಕಾರದ ಕೋರಿಕೆಯಂತೆ ಹೆಚ್ಚುವರಿ ಕೇಂದ್ರ ಪಡೆಗಳನ್ನು ರಾಜ್ಯಕ್ಕೆ ಕಳುಹಿಸಲಾಗಿದ್ದು, ರಾಜ್ಯದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ, ಎಲ್ಲಾ ಕ್ಷೇತ್ರ ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದ್ದು, ಸಿಆರ್ಪಿಸಿ ಸೆಕ್ಷನ್ 144ನಡಿ ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ತೀಪು ಪ್ರಕಟಗೊಂಡ ನಂತರ ಶಾಂತಿ ಕಾಪಾಡುವಂತೆ ರಾಜಕೀಯ ಮತ್ತು ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳು ಜನರಿಗೆ ಮನವಿ ಮಾಡಿವೆ. ತೀಪು ರಾಮ ಮಂದಿರ ಪರವಾಗಲಿ ಅಥವಾ ಬಾಬರಿ ಮಸೀದಿಯ ಪರವಾಗಿರಲಿ ಯಾವುದೇ ತೀಪು ಬಂದರೂ ಅದನ್ನು ಸ್ವೀಕರಿಸುತ್ತೇವೆ ಎಂದು ಎಲ್ಲಾ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಈಗಾಗಲೇ ಭರವಸೆ ನೀಡಿದ್ದಾರೆ. ಈ ಮಧ್ಯೆ, ಅರೆಸೈನಿಕ ಪಡೆಗಳ ಹೆಚ್ಚುವರಿ 40 ತುಕಡಿಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿದೆ. ಗೃಹ ಸಚಿವಾಲಯ (ಎಂಎಚ್ಎ) ಸೋಮವಾರ ಉತ್ತರ ಪ್ರದೇಶಕ್ಕೆ ಅರೆಸೈನಿಕ ಪಡೆಗಳ 40 ತುಕಡಿಗಳನ್ನು ಕಳುಹಿಸಲು ತಕ್ಷಣ ಅನುಮತಿ ನೀಡಿದ್ದು, ಇದು ನವೆಂಬರ್ 18 ರವರೆಗೆ ರಾಜ್ಯದಲ್ಲಿ ಉಳಿಯಲಿದೆ ಎಂದು ತಿಳಿದುಬಂದಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಅವರು ನಿವೃತ್ತರಾಗುವ ನವೆಂಬರ್ 17ರ ಮೊದಲು ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸುವ ನಿರೀಕ್ಷೆಯಿದೆ. ಅರೆಸೈನಿಕ ಪಡೆಗಳ 15 ತುಕಡಿಗಳು ತಕ್ಷಣವೇ ಉತ್ತರ ಪ್ರದೇಶಕ್ಕೆ ಬರಲಿವೆ. ಇದರಲ್ಲಿ ಬಿಎಸ್ಎಫ್, ಆರ್ಎಎಫ್, ಸಿಐಎಸ್ಎಫ್, ಐಟಿಬಿಪಿ ಮತ್ತು ಎಸ್ಎಸ್ಬಿಯ ತಲಾ ಮೂರು ಕಂಪನಿಗಳು ಸೇರಿವೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) ಇನ್ನೂ 15 ಕಂಪನಿಗಳು ನವೆಂಬರ್ 11 ರಂದು ಉತ್ತರ ಪ್ರದೇಶಕ್ಕೆ ತಲುಪಲಿದ್ದು, ಅದು ಪರಿಸ್ಥಿತಿ ನೋಡಿಕೊಂಡು ನವೆಂಬರ್ 18 ರವರೆಗೆ ಅಲ್ಲಿ ಇರಲಿವೆ. ಇದಲ್ಲದೆ, ನವೆಂಬರ್ 18 ರವರೆಗೆ ಕೇಂದ್ರವು ಕ್ಷಿಪ್ರ ಕಾರ್ಯಾಚರಣಾ ಪಡೆ (ಆರ್ಎಎಫ್) ನ ಹತ್ತು ತುಕಡಿಗಳಿಗೆ ಅನುಮತಿ ನೀಡಿದೆ. "ಆರ್ಎಎಫ್ನ 16 ಕಂಪನಿಗಳು ಮತ್ತು ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ಬಿ ಮತ್ತು ಬಿಎಸ್ಎಫ್ ತಲಾ ಆರು ಕಂಪನಿಗಳು ಸೇರಿದಂತೆ ಒಟ್ಟು 40 ಕಂಪನಿಗಳನ್ನು ನವೆಂಬರ್ 18 ರವರೆಗೆ ಯುಪಿಯಲ್ಲಿ ನಿಯೋಜಿಸಲಾಗುವುದು" ಎಂದು ಮೂಲಗಳು ತಿಳಿಸಿವೆ, ಈ ಅರೆಸೈನಿಕ ಕಂಪನಿಗಳನ್ನು ರಾಜ್ಯದ 12 ಅತ್ಯಂತ ಸೂಕ್ಷ್ಮ ಜಿಲ್ಲೆಗಳು ಮತ್ತು ನಗರಗಳಲ್ಲಿ ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಮತ್ತು ಅಯೋಧ್ಯೆಯ ತೀರ್ಪುನ ಸಮಯದಲ್ಲಿ ಮತ್ತು ನಂತರ ಶಾಂತಿ ಕಾಪಾಡಲು  ಕಾನ್ಪುರ, ಅಲಿಘಡ, ಲಕ್ನೋ, ಅಝಂಗಡ, ವಾರಣಾಸಿ ಮತ್ತು ಅಯೋಧ್ಯೆ ಮುಂತಾದ ಸ್ಥಳಗಳಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗುತ್ತದೆ. ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲು ವ್ಯವಸ್ಥೆ ಮಾಡಲು ಸ್ಥಳೀಯ ಆಡಳಿತವನ್ನು ಕೋರಲಾಗಿದೆ.   ಅಯೋಧ್ಯೆಯ ತೀರ್ಪುನ ಮೊದಲು ಬಿಗಿ ಭದ್ರತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಅನೂಜ್ ಕುಮಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಭಯೋತ್ಪಾದಕ ದಾಳಿ, ಕೋಮು ಗಲಭೆಗಳು, ಸಾರ್ವಜನಿಕರ ಆಕ್ರೋಶ, ವಿವಾದಿತ ಸ್ಥಳದಲ್ಲಿ ಯಾವುದೇ ಅಪಾಯವನ್ನು ಎದುರಿಸಲು ಪೊಲೀಸರು ಸಿದ್ಧರಾಗಿದ್ದಾರೆ ಮತ್ತು ಎಲ್ಲಾ ಲೋಪದೋಷಗಳ ಬಗ್ಗೆಯೂ ಕಾಳಜಿ ವಹಿಸಿದ್ದಾರೆ ಎಂದು ಎಸ್ಎಸ್ಪಿ ಆಶಿಶ್ ತಿವಾರಿ ತಿಳಿಸಿದ್ದಾರೆ.  "ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳು ನಾಲ್ಕು ಹಂತಗಳ ಭದ್ರತಾ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಜನರು ಶಾಂತವಾಗಿರಲು ಪ್ರೋತ್ಸಾಹಿಸಲು ಪೊಲೀಸರು ಜಿಲ್ಲೆಯ 1,600 ಪ್ರದೇಶಗಳಲ್ಲಿ 16,000 ಸ್ವಯಂಸೇವಕರನ್ನು ನೇಮಿಸಿದ್ದಾರೆ ಮತ್ತು ಅಷ್ಟೇ ಸಂಖ್ಯೆಯ 'ಡಿಜಿಟಲ್ ಸ್ವಯಂಸೇವಕರು' ಸಾಮಾಜಿಕ ಮಾಧ್ಯಮದ ಮೇಳೆ ನಿಗಾ ವಹಿಸಲಿದ್ದಾರೆ.  ಸ್ವಯಂಸೇವಕರು ಮಾಹಿತಿಯನ್ನು ರವಾನಿಸಲು ಆಡಳಿತವು ಹಲವಾರು ವಾಟ್ಸಾಪ್ ಗುಂಪುಗಳನ್ನು ರಚಿಸಿದೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ.  ಕೆಂಪು, ಹಳದಿ, ಹಸಿರು ಮತ್ತು ನೀಲಿ - ನಾಲ್ಕು ಭದ್ರತಾ ವಲಯಗಳನ್ನು ರಚಿಸಲಾಗಿದೆ. ಕೆಂಪು ಮತ್ತು ಹಳದಿ ಬಣ್ಣವನ್ನು ಕೇಂದ್ರೀಯ ಅರೆ ಸೇನಾ  ಪಡೆ (ಸಿಪಿಎಂಎಫ್) ನಿರ್ವಹಿಸುತ್ತಿದ್ದರೆ, ಹಸಿರು ಮತ್ತು ನೀಲಿ ಬಣ್ಣವನ್ನು ಸಿವಿಲ್ ಪೊಲೀಸರು ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು. ಕೆಂಪು ಭದ್ರತಾ ವಲಯವು ವಿವಾದಿತ ಸ್ಥಳವನ್ನು ಒಳಗೊಂಡಿದೆ, ಹಳದಿ ವಲಯವು ಅಯೋಧ್ಯೆಯ ಐದು ಮೈಲಿ ಪರಿಧಿಯನ್ನು ಒಳಗೊಂಡಿದೆ, ಹಸಿರು ವಲಯವು, ದೇವಾಲಯದ ಪಟ್ಟಣದ 14 ಮೈಲಿಗಳ ಪರಿಧಿಯನ್ನು ಮತ್ತು ನೀಲಿ ವಲಯವು ಅಯೋಧ್ಯೆಯ ಪಕ್ಕದ ಜಿಲ್ಲೆಗಳನ್ನು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು. ಭದ್ರತಾ ಪಡೆಗಳಿಗೆ ಏಳು ನೂರು ಸರ್ಕಾರಿ ಶಾಲೆಗಳು, 50 ಯುಪಿ ಬೋರ್ಡ್ ಅಧೀನದ ಶಾಲೆಗಳು ಮತ್ತು 25 ಸಿಬಿಎಸ್ಇ ಶಾಲೆಗಳಲ್ಲಿ ವಸತಿ ಮತ್ತಿತರ ಸ್ಥಳಾವಕಾಶ ಒದಗಿಸಲಾಗಿದೆ. ಭದ್ರತೆಗೆ ಸಂಬಂಧಿಸಿದ ಸಣ್ಣ ಘಟನೆಗಳು ಸಹ ಇತರ ರಾಜ್ಯಗಳಲ್ಲಿ ಭಾರೀ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು ಎಂಬ ಅರಿವು ಕೇಂದ್ರ ಸರ್ಕಾರಕ್ಕಿದೆ. ಆದ್ದರಿಂದ ಕೇಂದ್ರ ಮತ್ತು ಯುಪಿ ಸರ್ಕಾರದ ಉನ್ನತ ಭದ್ರತಾ ವಿಭಾಗಗಳ ನಡುವೆ ನಿಕಟ ಸಮನ್ವಯತೆ ಕಲ್ಪಿಸಲಾಗಿದೆ. ಭದ್ರತೆಯ ಬಗ್ಗೆ ಸರ್ಕಾರದ ನಿರ್ದೇಶನಗಳ ಉಲ್ಲಂಘನೆಯನ್ನು ಸಹಿಸಬಾರದು ಎಂದು ಪೊಲೀಸ್ ಠಾಣೆಗಳವರೆಗೂ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.   ಮತ್ತೊಂದೆಡೆ, ಅಯೋಧ್ಯೆಯ ತೀರ್ಪುನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಕಾಂಗ್ರೆಸ್ ತನ್ನ ಎಲ್ಲ ಮುಖಂಡರಿಗೆ ಸೂಚಿಸಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ಸಲಹಾ ಸಮಿತಿ ಸಭೆಯಲ್ಲಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು, ಇತ್ತೀಚೆಗೆ ನ್ಯಾಯಾಲಯದ ತೀರ್ಪುನ ನಂತರ ಯಾವುದೇ ಹೇಳಿಕೆ ನೀಡಬಾರದು ಮತ್ತು ಪಕ್ಷದ ಅಧಿಕೃತ ನಿಲುವುಗಾಗಿ ಕಾಯಬೇಕು ಎಂದು ನಾಯಕರಿಗೆ ಸೂಚನೆ ನೀಡಿದ್ದಾರೆ.    ಈ ಮಧ್ಯೆ, ಅಯೋಧ್ಯೆ ವಿವಾದ ಮೊಕದ್ದಮೆಯಲ್ಲಿ ಬರಲಿರುವ ಸುಪ್ರೀಂ ಕೋರ್ಟ್ ತೀರ್ಪುನ ಬಗ್ಗೆ ಯಾವುದೇ ಕಾರ್ಯಕ್ರಮ, ಸಭೆ ಅಥವಾ ಪ್ರತಿಭಟನೆ ನಡೆಸಲು ಯಾವುದೇ ವಕ್ಫ್ ಆಸ್ತಿಯನ್ನು ಬಳಸಲು ಅನುಮತಿಸದಂತೆ ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ ಎಲ್ಲಾ 'ಮುತವ್ವಾಲಿ'ಗಳಿಗೆ (ವಕ್ಫ್ ಆಸ್ತಿಗಳ ಉಸ್ತುವಾರಿ) ನಿರ್ದೇಶಿಸಿದೆ. ಅಯೋಧ್ಯೆ ವಿಷಯದಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲು ಇಮಾಂಬರಾ, ದರ್ಗಾ, ಕರ್ಬಾಲಾ, ಮಸೀದಿ, ಮಜಾರ್ ಅಥವಾ ಸ್ಮಶಾನ ಸೇರಿದಂತೆ ಯಾವುದೇ ವಕ್ಫ್ ಆಸ್ತಿಯನ್ನು ಬಳಸಬಾರದು ಎಂದು ಆದೇಶದಲ್ಲಿ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಸೀಮ್ ರಿಜ್ವಿ ಹೇಳಿದ್ದಾರೆ. ಈ ಆದೇಶ ಉಲ್ಲಂಘಿಸಿದರೆ ವಕ್ಫ್ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಿಜ್ವಿ ಎಚ್ಚರಿಸಿದ್ದಾರೆ. ವಕ್ಫ್ ಆಸ್ತಿಗಳಲ್ಲಿ ಪೂರ್ವನಿರ್ಧರಿತ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ಅನುಮತಿಸಲಾಗುವುದು ಎಂದು ಮಂಡಳಿ ಹೇಳಿದೆ. ಅಯೋಧ್ಯೆಯ ವಿಷಯದ ಬಗ್ಗೆ ಯಾವುದೇ ಸಂದೇಶವನ್ನು ಕಳುಹಿಸಲು ಅಥವಾ ಶಾಂತಿಗೆ ಅಡ್ಡಿಪಡಿಸುವ ಯಾವುದೇ ಸಭೆ, ಸಮಾರಂಭ ನಡೆಸಲು ಕರೆ ಮಾಡಲು ಧ್ವನಿವರ್ಧಕಗಳನ್ನು ಬಳಸುವುದನ್ನು ಅನುಮತಿಸಲಾಗುವುದಿಲ್ಲ. ಅಂತಹ ಘಟನೆಯಿಂದಾಗಿ ಶಾಂತಿಗೆ ತೊಂದರೆಯಾದರೆ ಸಂಬಂಧಪಟ್ಟ ಮುತವಲ್ಲಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.