ಪಕ್ಷಿ-ಪ್ರಾಣಿ ಸಂಕುಲದ ರಕ್ಷಣೆ ಹಾಗೂ ಸಾಮಾಜಿಕ ಕಾನೂನುಗಳ ಜಾಗೃತಿ ಕಾರ್ಯಕ್ರಮ

ಪಕ್ಷಿ-ಪ್ರಾಣಿ ಸಂಕುಲದ ರಕ್ಷಣೆ ಹಾಗೂ ಸಾಮಾಜಿಕ ಕಾನೂನುಗಳ ಜಾಗೃತಿ ಕಾರ್ಯಕ್ರಮ Awareness program on protection of bird and animal species and social laws

ಲೋಕದರ್ಶನ ವರದಿ 

      ಹಾವೇರಿ 27 : ಮನುಷ್ಯನ ದೇಹದಲ್ಲಿ ಶೇ. 70ರಷ್ಟು ನೀರಿನಂಶವಿರುವಂತೆ ಪ್ರಕೃತಿಯ ಸಮತೋಲನಕ್ಕೂ ನೀರು ಅತಿ ಅಗತ್ಯ ಬೇಸಿಗೆಯ ಈ ಕಠಿಣ ಸಮಯದಲ್ಲಿ ಬಾಯಾರಿದ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಮೂಲಕ ಜೀವ ಸಂಕುಲವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರ​‍್ಪ ಎನ್‌. ಅವರು ಕರೆ ನೀಡಿದರು. 

ಸೋಮವಾರ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾಟರ್ ಫಾರ್ ವಾಯ್ಸ್ಲೆಸ್ ಬೆಂಗಳೂರು ಹಾಗೂ ಜಿಲ್ಲಾ ಅಭಿಯೋಜನಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಾವೇರಿಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಟರ್ ಫಾರ್ ವಾಯ್ಸ್ಲೆಸ್ - ಪಾಣಿ-ಪಕ್ಷಿಗಳಿಗೆ ನೀರಿನ ಮಹತ್ವ ( ನೀರು ನೀಡಿ ಜೀವ ಉಳಿಸಿ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ) ಹಾಗೂ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಮತ್ತು ವರದಕ್ಷಿಣೆ ನಿಷೇಧ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ವಿಶ್ವ ಜಲ ದಿನಾಚರಣೆಯ ಮಹತ್ವವನ್ನು ವಿವರಿಸಿದ ನ್ಯಾಯಾಧೀಶರು ಹಿಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಜನರು ದೂರದೂರಿಗೆ ಹೋಗುತ್ತಿದ್ದ ಪರಿಸ್ಥಿತಿಯನ್ನು ಸ್ಮರಿಸಿದ ಅವರು ಇಂದಿನ ದಿನಗಳಲ್ಲಿ ನೀರಿನ ಕೊರತೆ ಮತ್ತೊಮ್ಮೆ ಹೆಚ್ಚುತ್ತಿರುವುದರಿಂದ ಸಂಗ್ರಹಣೆ ಮರುಬಳಕೆ ಮತ್ತು ಸಮರ​‍್ಕ ಉಪಯೋಗಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್‌. ಸಿ. ಸಿದ್ದನಗೌಡ ಮಾತನಾಡಿ ಪರಿಸರದಲ್ಲಿ ಮಾನವನು ಇತರ ಜೀವಿಗಳ ಮೇಲೆ ಅವಲಂಬಿತನಾಗಿದ್ದಾನೆ ಪರಿಸರದಲ್ಲಿ ಜೇನುನೊಣಗಳು ನಾಶವಾದರೆ ಮನುಷ್ಯನ ಅಂತ್ಯ ಹತ್ತಿರವಾದಂತೆ ಎಂಬ ಮಾತಿದೆ ಆದ್ದರಿಂದ ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು ಪ್ರಕೃತಿಯಲ್ಲಿರುವ ಮೂಕ ಜೀವಿಗಳು ನಮ್ಮಿಂದ ಏನನ್ನೂ ಕೇಳುವುದಿಲ್ಲ ಬಾಯಾರಿದಾಗ ಸ್ವಲ್ಪ ನೀರು ಕೊಟ್ಟರೆ ಸಾಕು ತಾಪಮಾನ ಏರುತ್ತಿರುವ ಈ ಕಾಲದಲ್ಲಿ ನಮ್ಮ ಮನೆಯ ಸುತ್ತಮುತ್ತ ಪ್ರಾಣಿ-ಪಕ್ಷಿಗಳಿಗೆ ನೀರು ಇಡುವ ಮೂಲಕ ಪರಿಸರ ಪ್ರೇಮ ಮೆರೆಯೋಣ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ವಾಟರ್ ಫಾರ್ ವಾಯ್ಸಲೆಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ರಂಜನಾ ಚಂದ್ರಶೇಖರ ಅವರು ಪ್ರಾಣಿ-ಪಕ್ಷಿಗಳಿಗೆ ನೀರಿನ ಅಗತ್ಯತೆ ಹಾಗೂ ನೀರಿನ ತೊಟ್ಟಿಗಳನ್ನು ಇಡುವ ಕುರಿತು ಉಪನ್ಯಾಸ ನೀಡಿದರು. ಕಾನೂನು ನೆರವು ಸಹಾಯಕ ಅಭಿರಕ್ಷಣಾ ವಕೀಲರಾದ ಎನ್‌. ಎಸ್‌. ಡಿಳ್ಳೆಪ್ಪನವರ ಅವರು ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಮತ್ತು ವರದಕ್ಷಿಣೆ ನಿಷೇದ ಕಾಯ್ದೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀಶೈಲಜಾ ಹೆಚ್‌.ವಿ ರವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿಯೋಜಕರಾದ  ಸರೋಜಾ ಕೂಡ್ಲಗಿಮಠ, ಮುಖ್ಯ ಕಾನೂನು ನೆರವು ಅಭಿರಕ್ಷಣಾ ವಕೀಲರು, ಎಲ್‌.ಎ.ಡಿ.ಸಿ.ಎಸ್ ವಿ.ಜಿ. ದೊಡ್ಡಗೌಡರ, ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.