ಎಐ ಮತ್ತು ಸೈಬರ್ ಭದ್ರತೆ ಕುರಿತು ಜಾಗೃತಿ ಕಾರ್ಯಕ್ರಮ

ಎಐ ಮತ್ತು ಸೈಬರ್ ಭದ್ರತೆ ಕುರಿತು ಜಾಗೃತಿ ಕಾರ್ಯಕ್ರಮ  Awareness program on AI and cybersecurity

ಲೋಕದರ್ಶನ ವರದಿ

ಗದಗ 7: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ಧಾರವಾಡ ಹಾಲು ಒಕ್ಕೂಟ, ಮರ್ಚಂಟ್ಸ್‌ ಲಿಬರಲ್ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘ-ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ ಸಹಕಾರ ಸಪ್ತಾಹ ಅಂಗವಾಗಿ ‘ಎಐ  ಮತ್ತು ಸೈಬರ್ ಸೆಕ್ಯುರಿಟಿ’ ಕುರಿತು ಜಾಗೃತಿ ಕಾರ್ಯಕ್ರಮ ಸೋಮವಾರ ಸಂಜೆ ಮರ್ಚಂಟ್ಸ್‌ ಲಿಬರಲ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿಎಸ್ಪಿ ಮಹೇಶ್ ಸಜ್ಜನರ, ಕೃತಕ ಬುದ್ಧಿಮತ್ತೆ  ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಕಲಿ ಮಾಹಿತಿ, ಫೇಕ್ ಫೋಟೋ, ವಿಡಿಯೋ ಹಾಗೂ ಆನ್ಲೈನ್ ವಂಚನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.  ಯಾವುದೇ ಮಾಹಿತಿ ಬಂದ ತಕ್ಷಣ ನಂಬದೆ ಅಧಿಕೃತ ಮೂಲಗಳಿಂದ ಪರೀಶೀಲಿಸಬೇಕು. ಅಪರಿಚಿತ ಲಿಂಕ್ ಅಥವಾ ಫೈಲ್ ತೆರೆಯಬಾರದು. ಒಟಿಪಿ, ಬ್ಯಾಂಕ್ ಖಾತೆ ವಿವರ, ಪಾಸ್ವರ್ಡ್‌ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅನುಮಾನಾಸ್ಪದ ವಂಚನೆಗಳು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ಅಥವಾ ಸೈಬರ್ ಕ್ರೈಂ ಪೋರ್ಟಲ್ನಲ್ಲಿ ದೂರು ದಾಖಲಿಸಬೇಕು ಎಂದು ಸಲಹೆ ನೀಡಿದರು.  

ಸೈಬರ್ ಭದ್ರತೆಗಾಗಿ ಬಲಿಷ್ಠ ಪಾಸ್ವರ್ಡ್‌ ಬಳಕೆ, ಎರಡು ಹಂತದ ದೃಢೀಕರಣ  ಅಧಿಕೃತ ಆ್ಯಪ್ಗಳ ಬಳಕೆ, ಮೊಬೈಲ್ ಹಾಗೂ ಕಂಪ್ಯೂಟರ್ಗಳ ಸಾಫ್ಟ್ವೇರ್ಗಳನ್ನು ನಿಯಮಿತವಾಗಿ ನವೀಕರಿಸುವುದು ಮತ್ತು ಸಾರ್ವಜನಿಕ ವೈ-ಫೈ ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮರ್ಚಂಟ್ಸ್‌ ಲಿಬರಲ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮೋಹನ ಟಿ. ಕೋಟಿರ ಮಾತನಾಡಿ, ಎಐ ತಂತ್ರಜ್ಞಾನ ಮಾಹಿತಿ ವಿಶ್ಲೇಷಣೆ ಹಾಗೂ ಸೇವೆಗಳನ್ನು ವೇಗವಾಗಿ ಒದಗಿಸಲು ಸಹಕಾರಿಯಾಗಿದ್ದು, ಸೈಬರ್ ಭದ್ರತೆಯ ಅರಿವು ಪ್ರತಿಯೊಬ್ಬ ಸಿಬ್ಬಂದಿಗೂ ಅಗತ್ಯವಾಗಿದೆ ಎಂದರು.